ನವದೆಹಲಿ: ಭಾರತೀಯ ಜನತಾ ಪಕ್ಷದ (Bharatiya Janata Party) ಹಿರಿಯ ನೇತಾರ ಹಾಗೂ ಮಾಜಿ ಪ್ರಧಾನ ಮಂತ್ರಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರಿಗೆ ಇಂದು ಜನ್ಮದಿನದ ಸಂಭ್ರಮ, ಇಂದು ಅಟಲ್ ಜೀ ಬದುಕಿದ್ದರೆ ಅವರಿಗೆ 100 ವರ್ಷ ಭರ್ತಿಯಾಗುತ್ತಿತ್ತು. ಅಜಾತ ಶತ್ರುವಿನ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಪಕ್ಷದ ಹಿರಿಯ ನಾಯಕನ ಗುಣಗಾನ ಮಾಡಿದ್ದು ಅಟಲ್ ಅವರನ್ನು ‘ಭಾರತದ 21ನೇ ಶತಮಾನದ ಪರಿವರ್ತನೆಯ ಹರಿಕಾರ’ ಎಂದು ಮೋದಿ ಕೊಂಡಾಡಿದ್ದಾರೆ. ಮತ್ತು 21ನೇ ಶತಮಾನದಲ್ಲಿ ಭರತವನ್ನು ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವಲ್ಲಿ ಅಂದು ಅಟಲ್ ಬಿಹಾರಿ ವಾಜಪೇಯಿ ಅವರು ಹಾಕಿಕೊಟ್ಟಿದ್ದ ಆರ್ಥಿಕ ಸುಧಾರಣೆಯ ತಳಪಾಯದ ಬಗ್ಗೆಯೂ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶಕ್ಕೆ ನಿಡಿರುವ ಅಮೂಲ್ಯ ಕೊಡುಗೆಗಳನ್ನು ತನ್ನ ಒಂದು ಸುದೀರ್ಘ ಲೇಖನದ ಮೂಲಕ ಸ್ಮರಿಸಿಕೊಂಡಿರುವ ಪ್ರಧಾನಿ ಮೋದಿ ಅವರು ಈ ಮಹಾನ್ ನಾಯಕನ ರಾಜಕೀಯ ಮತ್ತು ಆರ್ಥಿಕ ದೃಷ್ಟಿಕೋನಗಳ ಕುರಿತು ಈ ಲೇಖನದಲ್ಲಿ ಬೆಳಕು ಚೆಲ್ಲಿದ್ದು, ದೇಶದ ಹಲವು ಪತ್ರಿಕೆಗಳಲ್ಲಿ ಪ್ರಧಾನಿ ಮೋದಿ ಅವರ ಈ ಲೇಖನ ಪ್ರಕಟಗೊಂಡಿದೆ.
ವಾಜಪೇಯಿ ಅವರು ಓರ್ವ ಸಂಸದನಾಗಿ ತಮ್ಮ ಸಂಸತ್ ಜೀವನದ ಬಹುಭಾಗವನ್ನು ವಿರೋಧ ಪಕ್ಷದಲ್ಲೇ ಕಳೆದರು. ಆದರೆ, ಅದೊಂದು ಸಮಯದಲ್ಲಿ ಕಾಂಗ್ರೆಸ್ (Congress) ಅವರನ್ನು ‘ದೇಶದ್ರೋಹಿ’ ಎಂದು ಕರೆದರೂ ಸಹ ಅವರೆಂದೂ ಯಾರ ಬಗ್ಗೆಯೂ ತನ್ನ ಮನಸ್ಸಿನಲ್ಲಿ ಕಹಿ ಭಾವನೆಯನ್ನು ಎಂದಿಗೂ ಇರಿಸಿಕೊಳ್ಳಲಿಲ್ಲ ಎಂದು ಮೋದಿ ಅವರು ತಮ್ಮ ಲೇಖನದಲ್ಲಿ ಈ ಮಹಾನ್ ನಾಯಕನ ವ್ಯಕ್ತಿತ್ವದ ಚಿತ್ರಣವನ್ನು ಇಂದಿನ ಯುವ ಜನಾಂಗಕ್ಕೆ ನೀಡಿದ್ದಾರೆ.
‘ಓರ್ವ ರಾಜಕಾರಣಿಯಾಗಿ ಅಟಲ್ ಜೀ ಅವರದ್ದು ಮೇರು ಸದೃಶವಾದ ವ್ಯಕ್ತಿತ್ವ. ಮತ್ತು ಅವರು ನನ್ನನ್ನೂ ಸೇರಿದಂತೆ ಅಸಂಖ್ಯ ಜನರಿಗೆ ಒಂದು ಸ್ಪೂರ್ತಿಯ ಸೆಲೆ’ ಎಂದು ಮೋದಿ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಈ ಲೇಖನದಲ್ಲಿ ಪ್ರಧಾನಿ ಮೋದಿ ಅವರು ತಾವು ವಾಜಪೇಯಿ ಜೊತೆಗಿರುವ ಅಮೂಲ್ಯ ಕ್ಷಣವೊಂದರ ಫೊಟೋವನ್ನು ಸಹ ಹಂಚಿಕೊಂಡಿದ್ದಾರೆ.
ಅಟಲ್ ಜೀ ಅವರೊಂದಿಗೆ ಒಡನಾಟವನ್ನು ಮಾಡಿ ಅವರಿಂದ ಬಹಳಷ್ಟು ವಿಚಾರವನ್ನು ಕಲಿಯುವಂತಹ ಅವಕಾಶ ನನ್ನಂತೆ ಹಲವಾರು ಬಿಜೆಪಿ ನಾಯಕರಿಗೆ ಲಭ್ಯವಾಗಿರುವುದೇ ನಮ್ಮ ಸುದೈವ ಎಂದು ಈ ಮೇರು ನಾಯಕನ ಜೊತೆಗಿನ ತಮ್ಮ ಹಳೆಯ ಒಡನಾಟಗಳನ್ನು ಪ್ರಧಾನಿ ಮೋದಿ ಈ ಲೇಖನದ ಮೂಲಕ ಮೆಲುಕು ಹಾಕಿದ್ದಾರೆ.
ತತ್ವ ಸಿದ್ಧಾಂತ ಹಾಗೂ ಅಧಿಕಾರದ ವಿಚಾರ ಬಂದಾಗ ಅಟಲ್ ಜೀ ಅವರು ಯಾವಾಗಲೂ ಮೊದಲನೆಯದ್ದನ್ನೇ ಆರಿಸಿಕೊಳ್ಳುತ್ತಿದ್ದರು ಎಂದು ಬರೆದುಕೊಂಡಿರುವ ಪ್ರಧಾನಿ ಮೋದಿ ಅವರು, ‘ನಮ್ಮ ದೇಶದಲ್ಲಿ ಕಾಂಗ್ರೆಸ್ಸೇತರ ಒಂದು ರಾಜಕೀಯ ನೋಟ ಸಾಧ್ಯ ಎಂಬುದನ್ನು ಅಟಲ್ ಜೀ ಅವರು ದೇಶದ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು ಮತ್ತು ಇದನ್ನು ಸಾಧ್ಯವಾಗಿಸಿ ತೋರಿಸಿದರು’ ಎಂದು ಅವರು ತಮ್ಮ ನಾಯಕನ ರಾಜಕೀಯ ವ್ಯಕ್ತಿತ್ವದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಇನ್ನು ತಮ್ಮ ಅಟಲ್ ಜೀ ಬಗೆಗಿನ ತಮ್ಮ ಲೇಖನದಲ್ಲಿ ಪ್ರಧಾನಿ ಮೋದಿ ಅವರು, ಅಟಲ್ ಜೀ ಅವರ ನಾಯಕತ್ವ ಗುಣದ ತಾಕತ್ತಿಗೊಂದು ಉತ್ತಮ ಉದಾಹರಣೆಯನ್ನು ನೀಡಿದ್ದಾರೆ. ಅದು 1998ರ ಸಮಯ. ಆ ವರ್ಷ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು ಮತ್ತು ಅಟಲ್ ಜೀ ಅವರು ಪ್ರಧಾನಮಂತ್ರಿಗಳಾಗಿದ್ದರು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ, ಅಂದರೆ ಮೇ 11 ರಂದು ಭಾರತ ‘ಅಪರೇಷದ ಶಕ್ತಿ’ ಹೆಸರಿನಲ್ಲಿ ಪೋಖ್ರಾಣ್ ಅಣು ಪರೀಕ್ಷೆಯನ್ನು ನಡೆಸುವ ಮೂಲಕ ಅಮೆರಿಕಾ ಸೇರಿದಂತೆ ವಿಶ್ವದ ಅಣ್ವಸ್ತ್ರ ರಾಷ್ಟ್ರಗಳು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. ಇಂತಹ ಧೈರ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ತಾಖತ್ತು ಅಟಲ್ ಜೀ ಅವರಲ್ಲಿತ್ತು ಎಂದು ಪ್ರಧಾನಿ ಮೋದಿ ಅಂದಿನ ಘಟನೆಯನ್ನು ತಮ್ಮ ಲೇಖನದಲ್ಲಿ ಮತ್ತೆ ನೆನಪಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ವಿಮಾನದಲ್ಲಿ ಜೋರಾಗಿ ಅತ್ತ ಪುಟ್ಟ ಬಾಲಕಿಯನ್ನು ಸಮಾಧಾನಪಡಿಸಿದ ಲೆಬನಾನ್ ಸಂಗೀತಗಾರ… ವಿಡಿಯೊ ನೋಡಿ
ಭಾರತದ ವಿಜ್ಞಾನಿಗಳ ಶಕ್ತಿ ಸಾಮರ್ಥ್ಯವನ್ನು ಕಂಡು ವಿಶ್ವವೇ ಬೆರಗಾಗಿತ್ತು. ಕೆಲ ದೇಶಗಳಿಂದ ಇದಕ್ಕೆ ವಿರೋಧವೂ ಬಂತು, ಆದರೆ ಅಟಲ್ ನಿರ್ದಾರ ಅಚಲವಾಗಿತ್ತು, ಮೇ 13ರಂದು ಅಂದರೆ ಪ್ರಥಮ ಅಣು ಪರೀಕ್ಷೆ ನಡೆದ ಎರಡೇ ಎರಡು ದಿನಗಳ ಬಳಿಕ ಎರಡನೇ ಅಣ್ವಸ್ತ್ರ ಪರೀಕ್ಷೆಗೆ ಅಟಲ್ ಜೀ ಹಸಿರು ನಿಶಾನೆ ತೋರಿಯೇ ಬಿಟ್ಟಿದ್ದರು! ಮೊದಲ ಅಣ್ವಸ್ತ್ರ ಪರೀಕ್ಷೆ ಭಾರತೀಯ ವಿಜ್ಞಾನಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರೆ, ಎರಡನೇ ಪರೀಕ್ಷೆ ದೇಶದ ಸಶಕ್ತ ರಾಜಕೀಯ ನಾಯಕತ್ವಕ್ಕೆ ಕೈಗನ್ನಡಿ ಹಿಡಿದಂತಿತ್ತು.. ಎಂದು ಪ್ರಧಾನಿ ಮೋದಿ ಅವರು ಆ ಐತಿಹಾಸಿಕ ಘಟನೆಯ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
‘ಅವಕಾಶವಾದದ ಬೆನ್ನು ಹತ್ತಿ ಅವರೆಂದೂ ಅಧಿಕಾರಕ್ಕೆ ಅಂಟಿ ಕೂತವರಲ್ಲ..’ ಎಂದು ಪ್ರಧಾನಿ ಮೋದಿ ಅಟಲ್ ಜೀ ಬಗ್ಗೆ ತಮ್ಮ ಲೇಖನದಲ್ಲಿ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. 1996ರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಅವರು ಸಂಸದರ ಕುದುರೆ ವ್ಯಾಪಾರದ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ಗೋಜಿಗೆ ಹೋಗದೇ ನೇರವಾಗಿ ಜನರ ಮುಂದೆ ಹೋದ ಧೀಮಂತ ನಾಯಕರಾದರು.
ಮಾತ್ರವಲ್ಲದೇ 1999ರಲ್ಲಿ ಸಂಸತ್ತಿನಲ್ಲಿ ತನಗೆ ಬಹುಮತ ಸಾಬೀತುಪಡಿಸಲು ಕೇವಲ ಒಂದೇ ಒಂದು ಸಂಸದರ ಕೊರತೆಯಾದಾಗಲೂ ಅಧಿಕಾರಕ್ಕಾಗಿ ಯಾವುದೇ ಅಡ್ಡದಾರಿ ಹಿಡಿಯದೇ ರಾಜಿನಾಮೆ ಬಿಸಾಕಿ ಮತ್ತೆ ಜನರ ಮುಂದೆ ಹೊದಂತಹ ಧೀಮಂತ ನಾಯಕ ಅಟಲ್ ಜೀ ಎಂದು ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ರಾಜಕಿಯ ನಿಲುವುಗಳ ಬಗ್ಗೆ ಬರೆದುಕೊಂಡಿದ್ದಾರೆ.
ಇದೀ ರೀತಿಯಾಗಿ ಪ್ರಧಾನಿ ಮೋದಿ ಅವರು ತಮ್ಮ ಸುದೀರ್ಘ ಲೇಖನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವ-ಸಿದ್ದಾಂತ ಭರಿತ ರಾಜಕಾರಣ ಮತ್ತು ಸ್ಟಟಿಕದಂತಹ ಸ್ಪುಟ ವ್ಯಕ್ತಿತ್ವದ ಕುರಿತಾಗಿ ಹಲವಾರು ಉದಾಹರಣೆಗಳ ಮೂಲಕ ಮೇರು ನಾಯಕನ ವ್ಯಕ್ತಿತ್ವನ್ನು ಸ್ಮರಿಸಿಕೊಂಡಿದ್ದಾರೆ.