Friday, 22nd November 2024

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅಡಿಪಾಯ ಅಲುಗಾಡಿಸುತ್ತೇನೆ; ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ

Ayodhya Ram Mandir

ಲಖನೌ: ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ (Ayodhya Ram Mandir)ದ ಮೇಲೆ ದಾಳಿ ನಡೆಸುವುದಾಗಿ ಸಿಖ್ಸ್ ಫಾರ್ ಜಸ್ಟಿಸ್ (SFJ) ಸ್ಥಾಪಕ, ಖಲಿಸ್ತಾನಿ ಉಗ್ರ (Khalistan Terrorist) ಗುರುಪತ್ವಂತ್ ಸಿಂಗ್ ಪನ್ನುನ್‌ (Gurpatwant Singh Pannun) ಬೆದರಿಕೆ ಹಾಕಿದ್ದಾನೆ. ವಿಡಿಯೊ ಬಿಡುಗಡೆ ಮಾಡಿರುವ ಆತ “ಅಯೋಧ್ಯೆಯಲ್ಲಿ ಹಿಂಸಾಚಾರ ನಡೆಯಲಿದೆ. ಆ ಮೂಲಕ ಹಿಂದುತ್ವ ಸಿದ್ಧಾಂತದ ಅಡಿಪಾಯವನ್ನು ಅಲುಗಾಡಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ಅಯೋಧ್ಯೆ ಜತೆಗೆ ಇತರ ಹಿಂದೂ ದೇವಾಲಯಗಳ ಮೇಲೆ ನ. 16 ಮತ್ತು 17ರಂದು ದಾಳಿ ನಡೆಸುವುದಾಗಿ ತಿಳಿಸಿದ್ದಾನೆ. ಭಾರತೀಯ ಮೂಲದ ಕೆನಡಾದ ಅನೇಕ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಸಿದ್ಧಾಂತವನ್ನು ಅನುಸರಿಸುತ್ತಾರೆ ಎಂದು ಪನ್ನುನ್ ವೀಡಿಯೊದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಹಿಂದೂ ಸಂಸದ ಚಂದನ್ ಆರ್ಯ ಅವರಿಗೆ ಕೆನಡಾವನ್ನು ತೊರೆಯಿರಿ ಎಂದು ಪನ್ನುನ್ ಬಹಿರಂಗ ಬೆದರಿಕೆ ಹಾಕಿದ್ದಾನೆ. ಈ ವರ್ಷದ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರ್ಥಿಸುತ್ತಿರುವ ಚಿತ್ರಗಳೂ ವಿಡಿಯೊದಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೆಯೂ ಬೆದರಿಕೆ ಹಾಕಿದ್ದ ಪನ್ನುನ್‌

ಪನ್ನುನ್‌ ಈ ಹಿಂದೆಯೂ ಭಾರತಕ್ಕೆ ಬೆದರಿಕೆ ಹಾಕಿದ್ದ. ನ. 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಹಾರಾಟ ನಡೆಸದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದ. ಈ ಮೂಲಕ 1984ರ ಸಿಖ್‌ ವಿರೋಧಿ ದಂಗೆ ಮತ್ತು ಹತ್ಯಾಕಾಂಡ ನಡೆದು 40 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಭಾರಿ ದಾಳಿಗೆ ಖಲಿಸ್ತಾನಿ ಉಗ್ರರು ಸಂಚು ರೂಪಿಸಿದ್ದರು. ಕಳೆದ ವರ್ಷವೂ ಇದೇ ದಿನ ಇಂಹದ್ದೇ ಒಂದು ಎಚ್ಚರಿಕೆಯನ್ನು ಕೆನಡಾದಲ್ಲಿರುವ ಗುರುಪತ್ವಂತ್‌ ಸಿಂಗ್‌ ನೀಡಿದ್ದ.

ಮತ್ತೊಬ್ಬ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿ ಖಲಿಸ್ತಾನಿಗಳನ್ನು ಗುರಿಯಾಗಿಸಿ ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಕೆನಡಾ ಆರೋಪ ಮಾಡಿರುವ ಬೆನ್ನಲ್ಲೇ ಪನ್ನುನ್‌ ಈ ಬೆದರಿಕೆಯೊಡ್ಡಿದ್ದು ಆತಂಕಕ್ಕೆ ಕಾರಣವಾಗಿತ್ತು. 2023ರ ನವೆಂಬರ್‌ನಲ್ಲಿ ಪನ್ನುನ್ ದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡಲಾಗುವುದು ಮತ್ತು ನ. 19ರಂದು ಮುಚ್ಚಲಾಗುವುದು ಎಂದು ಹೇಳುವ ವಿಡಿಯೊವನ್ನು ಬಿಡುಗಡೆ ಮಾಡಿದ್ದ. ಅಲ್ಲದೇ ಆ ದಿನ ಏರ್ ಇಂಡಿಯಾದಲ್ಲಿ ಹಾರಾಟ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದ.

ಸಿಖ್ಸ್ ಫಾರ್ ಜಸ್ಟಿಸ್ (SFJ) ಗುಂಪಿನ ಸಾಮಾನ್ಯ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಈಗಾಗಲೇ ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. ಕೆಲವು ದಿನಗಳ ಹಿಂದೆ ಕೆನಡಾದ ನೆಲದಲ್ಲಿ ಭಾರತ ಬೇಹುಗಾರಿಕೆ ನಡೆಸುತ್ತಿದೆ ಎಂದು ಕೆನಡಾ ಆರೋಪವನ್ನು ಎತ್ತಿ ಹಿಡಿದಿರುವ ಪನ್ನುನ್‌, ಕಳೆದ ಹಲವು ವರ್ಷಗಳಿಂದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂವಹನ ನಡೆಸುವುದನ್ನು ಒಪ್ಪಿಕೊಂಡಿದ್ದ.

ಈ ಸುದ್ದಿಯನ್ನೂ ಓದಿ: Indian Raw Agent: ಪನ್ನುನ್‌ ಹತ್ಯೆಗೆ ಸಂಚು ಆರೋಪ ಹೊತ್ತಿರುವ ಮಾಜಿ ʻರಾʼ ಏಜೆಂಟ್‌ ವಿಕಾಸ್‌ ಯಾದವ್‌ ಬಗ್ಗೆ ಶಾಕಿಂಗ್‌ ಸಂಗತಿ ಲೀಕ್!