Monday, 25th November 2024

Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ವ್ಹೀಲ್‌ಚೇರ್‌ ಲಭ್ಯ; ಈ ಸೌಲಭ್ಯ ಬಳಸಿಕೊಳ್ಳುವುದು ಹೇಗೆ?

Ayodhya Ram Mandir

ಲಖನೌ: ಕೋಟ್ಯಂತರ ಭಕ್ತರ ಬಹು ವರ್ಷದ ಕನಸು ನನಸಾಗಿಸಿ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲಕ ರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ನೆರವೇರಿದೆ (Ayodhya Ram Mandir). ಪ್ರಾಣ ಪ್ರತಿಷ್ಠೆಯ ಬಳಿಕ ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರ ಪ್ರವಾಹವೇ ಹರಿದು ಬರುತ್ತಿದೆ. ದೇಶದ ಮೂಲೆ ಮೂಲೆಗಳಿಂದ, ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ದೇವಾಲಯದ ಟ್ರಸ್ಟ್‌ ಭಕ್ತರ ಅನುಕೂಲಕ್ಕಾಗಿ ವ್ಹೀಲ್‌ಚೇರ್‌ (Wheelchair) ಒದಗಿಸುತ್ತಿದೆ.

ಹಿರಿಯ ಮತ್ತು ವಿಶೇಷ ಚೇತನ ಭಕ್ತರ ಅನುಕೂಲಕ್ಕಾಗಿ ವ್ಹೀಲ್‌ಚೇರ್‌ ಸೌಲಭ್ಯವನ್ನು ರಾಮ ಮಂದಿರ ಟ್ರಸ್ಟ್‌ ಪರಿಚಯಿಸಿದೆ. ಇದಕ್ಕಾಗಿ ಕೆಲವೊಂದು ಷರತ್ತನ್ನು ವಿಧಿಸಲಾಗಿದೆ. ದೇವಾಲಯದ ಪ್ರಾಂಗಣದಲ್ಲಿ ಮಾತ್ರ ಈ ಸೌಲಭ್ಯ ದೊರೆಯಲಿದೆ. ದೇವಾಲಯದ ಆವರಣದಲ್ಲಿ ಭಕ್ತರು ತರುವ ವ್ಹೀಲ್‌ಚೇರ್‌ಗೆ ಅನುಮತಿ ನೀಡಲಾಗುವುದಿಲ್ಲ.

ಜತೆಗೆ ವ್ಹೀಲ್‌ಚೇರ್‌ ಬಳಸುವ ಭಕ್ತರು ಟ್ರಸ್ಟ್‌ನ ಡ್ರೆಸ್‌ ಕೋಡ್‌ ಅನ್ನು ಪಾಲಿಸಬೇಕಾಗುತ್ತದೆ. ವ್ಹೀಲ್‌ಚೇರ್‌ ಬಳಸುವವರು ಕೇಸರಿ ಬಣ್ಣದ ಬಟ್ಟೆ ತೊಡಬೇಕು. ಇದರಿಂದ ಜನಸಂದಣಿಯ ಮಧ್ಯೆ ಅವರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ. ಭಕ್ತರ ದರ್ಶನದ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಭೇಟಿಯ ಸಮಯದಲ್ಲಿ ಉಂಟಾಗಬಹುದಾದ ಯಾವುದೇ ಅನಾನುಕೂಲತೆಯನ್ನು ತಡೆಗಟ್ಟುವ ಉದ್ದೇಶವನ್ನು ಇದು ಹೊಂದಿದೆ ಎಂದೂ ಅವರು ಹೇಳಿದ್ದಾರೆ.

ವ್ಹೀಲ್‌ಚೇರ್‌ ಬುಕ್‌ ಮಾಡುವುದು ಹೇಗೆ?

ಮೊದಲಿಗೆ ದೇವಸ್ಥಾನದ ಪರಿಸರದಲ್ಲಿರುವ ತೀರ್ಥ ಯಾತ್ರಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ವ್ಹೀಲ್‌ಚೇರ್‌ಗೆ ಹೆಸರು ನೋಂದಾಯಿಸಬೇಕು. ಹೆಸರು ನೋಂದಾಯಿಸಲು ನಿಮ್ಮ ಆಧಾರ್‌ ಕಾರ್ಡ್‌ ನೀಡಬೇಕಾಗುತ್ತದೆ. ಆಗ ಕೇಂದ್ರದವರು ತರಬೇತಿ ಹೊಂದಿದ ವ್ಹೀಲ್‌ಚೇರ್‌ ಮುನ್ನೆಡೆಸಬಲ್ಲ ಸಹಾಯಕನ್ನು ಒದಗಿಸುತ್ತಾರೆ. ಈ ಸೌಲಭ್ಯಕ್ಕಾಗಿ ನೀವು 150 ರೂ. ಸುಲ್ಕ ಪಾವತಿಬೇಕಾಗುತ್ತದೆ.

ಪದಾಧಿಕಾರಿ ಹೇಳಿದ್ದೇನು?

ʼʼಭಕ್ತರ ಮಧ್ಯೆ ಕುಟುಂಬದ ಸದಸ್ಯರಿಗೆ ಗುರುತಿಸಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ವ್ಹೀಲ್‌ಚೇರ್‌ ಬಳಕೆದಾರರಿಗೆ ಕೇಸರಿ ಬಣ್ಣದ ಬಟ್ಟೆ ಕಡ್ಡಾಯಗೊಳಿಸಿದ್ದೇವೆ. ವಿಶೇಷವಾಗಿ ಹೆಚ್ಚಿನ ಜನ ಸಂದಣಿ ವೇಳೆ ಉಂಟಾಗುವ ಗೊಂದಲವನ್ನು ನಿವಾರಿಸಲು ಈ ಕ್ರಮ ನೆರವಾಗಲಿದೆʼʼ ಎಂದು ರಾಮ ಮಂದಿರ ಟ್ರಸ್ಟಿ ಗೋಪಾಲ್‌ ರಾವ್‌ ತಿಳಿಸಿದ್ದಾರೆ.

ʼʼಈ ಯೋಜನೆ ನಡೆದಾಡಲು ಕಷ್ಟಪಡುವ ವೃದ್ಧರು ಮತ್ತು ವಿಶೇಷ ಚೇತನರಿಗೆ ಅನುಕೂಲವಾಗಲಿದೆ. ಅಯೋಧ್ಯೆ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವ್ಹೀಲ್‌ಚೇರ್‌ ಅನ್ನು ಪರಿಚಯಿಸಲು ಮುಂದಾಗಿದ್ದೇವೆ. ಪ್ರತಿಯೊಬ್ಬರಿಗೂ ಮುಕ್ತವಾಗಿ ರಾಮನ ದರ್ಶನ ದೊರೆಯುವಂತಾಗಬೇಕು ಎನ್ನುವುದೇ ನಮ್ಮ ಉದ್ದೇಶʼʼ ಎಂದು ಅವರು ವಿವರಿಸಿದ್ದಾರೆ.

ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಕರ್ನಾಟಕದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ 51 ಇಂಚು ಎತ್ತರದ ಬಾಲಕ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ಈ ಸುದ್ದಿಯನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣದಿಂದ ಬರೋಬ್ಬರಿ 400 ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಚಂಪತ್‌ ರಾಯ್‌