Thursday, 12th December 2024

ಅಯೋಧ್ಯೆಯಲ್ಲಿ ರಸ್ತೆ ದುರಂತ: ಏಳು ಮಂದಿ ಸಾವು

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಖಾಸಗಿ ಬಸ್​ ಮತ್ತು ಟ್ರಕ್​ ಮಧ್ಯೆ ಡಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿದ್ದರೆ, 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಲಕ್ನೋ ಗೋರಖ್‌ಪುರ ಹೆದ್ದಾರಿಯ ಅಯೋಧ್ಯಾ ಕೊತ್ವಾಲಿ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದೆ.

ಅಯೋಧ್ಯೆಯಿಂದ ಬರುತ್ತಿದ್ದ ಖಾಸಗಿ ಬಸ್ ಅಂಬೇಡ್ಕರ್‌ನಗರ ಕಡೆಗೆ ತೆರಳಲು ಹೆದ್ದಾರಿಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ ಮೇಲೆ ಟ್ರಕ್​​ ಉರುಳಿಕೊಂಡು ಬಿದ್ದಿದೆ. ಬಸ್​ನಲ್ಲಿದ್ದ ಜನರ ಪೈಕಿ 7 ಮಂದಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಘಟನೆಯ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಸ್​ನಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.