Thursday, 12th December 2024

Baba Siddique: ಬಾಬಾ ಸಿದ್ದಿಕಿ ಹಂತಕರ ಕುಟುಂಬಸ್ಥರು ಹೇಳೋದೇನು? ಇಲ್ಲಿದೆ ವಿಡಿಯೋ

shootout

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಬಾಬಾ ಸಿದ್ದಿಕಿ(Baba Siddique) ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಆರೋಪಿ ಧರ್ಮರಾಜ್‌ ಎರಡು ತಿಂಗಳ ಹಿಂದೆ ಮನೆ ಬಿಟ್ಟಿದ್ದ ಎಂದು ಆತನ ತಾಯಿ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಧರ್ಮರಾಜ್‌ ಕಶ್ಯಪ್‌(19) ತಾಯಿ, ಕಳೆದ ಕೆಲವು ತಿಂಗಳಿಂದ ಮಗ ಏನು ಮಾಡುತ್ತಿದ್ದಾನೆ ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪುಣೆಯಲ್ಲಿ ಕೆಲಸದಲ್ಲಿರುವುದಾಗಿ ಮಾತ್ರ ಹೇಳಿದ್ದ. ಅವನು ಪುಣೆಗೆ ತೆರಳಿದ ನಂತರ ಒಂದೇ ಒಂದು ಬಾರಿ ಫೋನ್‌ನಲ್ಲಿ ಮಾತನಾಡಿದ್ದೆ. ನನಗೆ ಇಷ್ಟು ಮಾತ್ರ ಗೊತ್ತು. ಇನ್ನು ಮುಂಬೈನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದಾರೆ.

ಇನ್ನು ತಲೆಮರೆಸಿಕೊಂಡಿರುವ ಆರೋಪಿ ಹರ್ಯಾಣ ಮೂಲದ ಗುರ್ಮೇಲ್‌ ಸಿಂಗ್‌ ಕುಟುಂಬಸ್ಥರೂ ಇದೇ ರೀತಿ ಹೇಳಿದ್ದಾರೆ. ಆತ ಮುಂಬೈಗೆ ಕೆಲಸಕ್ಕೆಂದು ಹೋಗಿದ್ದಾನೆ. ಅಲ್ಲಿನ ಏನು ನಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೋಳಿ ಸಂದರ್ಭದಲ್ಲಿ ಮನೆಗೆ ಬಂದಿದ್ದ. ಬರು ಬರುತ್ತಾ ನಮ್ಮ ಜತೆ ಫೋನ್‌ನಲ್ಲಿ ಮಾತನಾಡುವುದನ್ನೂ ನಿಲ್ಲಿಸಿದ್ದ. ಇನ್ನು ಮುಂದೆ ಅವನಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಆತನ ಅಜ್ಜಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Baba Siddique:`ಸಿದ್ದಿಕಿ ಹತ್ಯೆ ಮಾಡಿದ್ದು ನಾವೇ, ಕಾರಣ ಏನಪ್ಪ ಅಂದ್ರೆ..ʼ ಹೊಣೆ ಹೊತ್ತುಕೊಂಡ ಬಿಷ್ಣೋಯ್‌ ಗ್ಯಾಂಗ್‌

ಬಾಬಾ ಸಿದ್ದಿಕಿ ಯಾರು?

ಸೆಪ್ಟೆಂಬರ್ 13, 1959 ರಂದು ಬಿಹಾರ ಪಾಟ್ನಾದಲ್ಲಿ ಜನಿಸಿದ ಬಾಬಾ ಸಿದ್ದಿಕಿ ಮುಂಬೈನಲ್ಲಿ ಬೆಳೆದವರು. 1977ರಲ್ಲಿ ಹದಿಹರೆಯದವರಾಗಿದ್ದಾಗ ಕಾಂಗ್ರೆಸ್ ಸೇರಿಕೊಂಡಿದ್ದರು. ಸ್ಥಳೀಯ ಮತದಾರರೊಂದಿಗೆ ಬಲವಾದ ಸಂಪರ್ಕದಿಂದಾಗಿ ಅವರು ಶೀಘ್ರವಾಗಿ ರಾಜಕೀಯ ಯಶಸ್ಸು ಗಳಿಸಿದ್ದರು.

ಬಾಬಾ ಸಿದ್ದೀಕ್ 1980 ರಲ್ಲಿ ಬಾಂದ್ರಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು. ಮುಂದಿನ ಎರಡು ವರ್ಷಗಳಲ್ಲಿ ಅದರ ಮುಖ್ಯಸ್ಥರಾಗಿ ಆಯ್ಕೆಯಾದರು. 1988 ರಲ್ಲಿ, ಅವರು ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷರಾದರು ಮತ್ತು 1992 ರಲ್ಲಿ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದರು.

1999ರಲ್ಲಿ, ಸಿದ್ದೀಕ್ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಯ ಶಾಸಕ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಅವರ ತಳಮಟ್ಟದಲ್ಲಿ ಭಾರೀ ಬೆಂಬಲ ಮತ್ತು ನಾನಾ ಸಮುದಾಯಗಳಿಂದ ಮತದಾರರನ್ನು ಒಟ್ಟುಗೂಡಿಸುವ ಸಾಮರ್ಥ್ಯದ ಪರಿಣಾಮವಾಗಿ ಅವರಿಗೆ ಗೆಲವು ಸುಲಭವಾಗಿತ್ತು ಅವರು ಸತತ ಮೂರು ಬಾರಿ ಬಾಂದ್ರಾ ಪಶ್ಚಿಮವನ್ನು ಪ್ರತಿನಿಧಿಸಿದರು, 2014 ರವರೆಗೆ ಈ ಸ್ಥಾನವನ್ನು ಅಲಂಕರಿಸಿದ್ದರು.

ಶಾಸಕರಾಗಿದ್ದ ಅವಧಿಯಲ್ಲಿ, ಸಿದ್ದೀಕ್ ಅವರು ತಮ್ಮ ಕ್ಷೇತ್ರದ ಮೂಲಸೌಕರ್ಯಗಳನ್ನು ಸುಧಾರಿಸಲು, ಕೊಳೆಗೇರಿ ಪುನರ್ವಸತಿ, ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಲು ವ್ಯಾಪಕವಾಗಿ ಕೆಲಸ ಮಾಡಿದರು. ಹೀಗಾಗಿ ಅವರಿಗೆ ಹೆಚ್ಚಿನ ಜನಬೆಂಬಲವಿತ್ತು.