Friday, 22nd November 2024

Bahraich Unrest: ಬಹ್ರೈಚ್‌ ಉದ್ವಿಗ್ನ-ಉಗ್ರ ಸ್ವರೂಪ ಪಡೆದುಕೊಂಡ ಗಲಭೆ; ಆಸ್ಪತ್ರೆ, ವಾಹನಗಳಿಗೆ ಬೆಂಕಿ

bahraich

ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್‌ (Bahraich Unrest)ನಲ್ಲಿ ಭಾನುವಾರ (ಅಕ್ಟೋಬರ್‌ 13) ನವರಾತ್ರಿ ಮೆರವಣಿಗೆ ವೇಳೆ ಕೋಮು ಗಲಭೆ ಸಂಭವಿಸಿ 22 ವರ್ಷದ ಯುವಕನೊಬ್ಬ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಭಾರೀ ಕೋಮುಗಲಭೆಗೆ ನಾಂದಿ ಹಾಡಿದೆ. ಬಹ್ರೈಚ್‌ನಲ್ಲಿ ಭುಗಿಲೆದ್ದಿರುವ ಕೋಮಗಲಭೆ ಕ್ಷಣ ಕ್ಷಣಕ್ಕೂ ಭೀಕರವಾಗುತ್ತಿದ್ದು, ಉದ್ರಿಕ್ತರ ಗುಂಪು ಆಸ್ಪತ್ರೆ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ನಂತರ, ಜನರು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಬಲಪ್ರಯೋಗ ಮಾಡಿದರು. ಬಹ್ರೈಚ್‌ನ ಮಹ್ಸಿ ಉಪವಿಭಾಗದ ಮೂಲಕ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದಾಗ ಘರ್ಷಣೆಗಳು ಭುಗಿಲೆದ್ದಿದೆ ಎನ್ನಲಾಗಿದೆ. ಘರ್ಷಣೆಯ ನಂತರ ಜಿಲ್ಲಾಡಳಿತವು ಮಹ್ಸಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಪೊಲೀಸರು ಕನಿಷ್ಠ 30 ಜನರನ್ನು ಬಂಧಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದಲ್ಲಿ ಸಲ್ಮಾನ್ ಎಂಬಾತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಹತ್ತು ಜನರಲ್ಲಿ ಆರು ಜನರನ್ನು ಗುರುತಿಸಲಾಗಿದ್ದು, ಅಬ್ದುಲ್ ಹಮೀದ್, ಸರ್ಫರಾಜ್, ಫಹೀಮ್, ಸಾಹಿರ್ ಖಾನ್, ನಂಕೌ ಮತ್ತು ಮಾರ್ಫ್ ಅಲಿ ಎನ್ನಲಾಗಿದೆ. ಇನ್ನೂ ನಾಲ್ವರ ಗುರುತು ಪತ್ತೆಯಾಗಬೇಕಿದೆ.

ಇನ್ನು ಮೃತ ಮಿಶ್ರಾ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹಿಂದೇಟು ಹಾಕಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ.

ಏನಿದು ಘಟನೆ?

ದುರ್ಗಾ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆ ಮನ್ಸೂರ್ ಗ್ರಾಮದ ಮಹರಾಜ್ಗಂಜ್ ಬಜಾರ್ ಮೂಲಕ ಹಾದುಹೋದಾಗ ಘರ್ಷಣೆ ನಡೆದಿದೆ. ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹತ್ಯೆಯ ನಂತರ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಂಡಿತು. ಬಳಿಕ ಫಖರ್ಪುರ ಪಟ್ಟಣ ಮತ್ತು ಇತರ ಸ್ಥಳಗಳಲ್ಲಿನ ಮೆರವಣಿಗೆಗಳನ್ನು ರದ್ದುಗೊಳಿಸಲಾಯಿತು. ಆದಾಗ್ಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಗ್ರಹ ವಿಸರ್ಜನೆಯನ್ನು ಮುಂದುವರಿಸಬೇಕು ಮತ್ತು ಅದು ಸರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಧಾರ್ಮಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಆಡಳಿತಕ್ಕೆ ನಿರ್ದೇಶನ ನೀಡಿದರು.

ವಿಗ್ರಹವನ್ನು ವಿಸರ್ಜಿಸುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು ನಿರ್ದೇಶನ ನೀಡಲಾಯಿತು. ವಿವಿಧ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬಹ್ರೈಚ್‌ನಲ್ಲಿ ಉಂಟಾದ ಕೋಮು ಗಲಭೆ ಹಿನ್ನೆಲೆಯಲ್ಲಿ ಹಾರ್ಡಿ ಪೊಲೀಸ್ ಠಾಣೆಯ ಮುಖ್ಯಸ್ಥ ಎಸ್.ಕೆ.ವರ್ಮಾ ಮತ್ತು ಮಾಹ್ಸಿ ಹೊರಠಾಣೆಯ ಉಸ್ತುವಾರಿ ಶಿವ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Unrest in Bahraich: ದೇವಿ ವಿಗ್ರಹದ ಮೆರವಣಿಗೆ ವೇಳೆ ಕೋಮು ಸಂಘರ್ಷ; ಯುವಕ ಬಲಿ