Saturday, 28th December 2024

Bandra Stampede: ಮುಂಬೈಯ ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರೀ ಕಾಲ್ತುಳಿತ; 9 ಜನರ ಸ್ಥಿತಿ ಗಂಭೀರ

Bandra stampede

ಮುಂಬೈ: ಭಾನುವಾರ ಬೆಳ್ಳಂಬೆಳಗ್ಗೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರೀ ದುರಂತ(Bandra Stampede)ವೊಂದು ಸಂಭವಿಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ಸಂಭವಿಸಿದ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ.

ಬಾಂದ್ರಾ ಟರ್ಮಿನಸ್‌ನ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ ಬೆಳಿಗ್ಗೆ 5.56 ಕ್ಕೆ 22921 ಬಾಂದ್ರಾ-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಹತ್ತಲು ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಅನೇಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರನ್ನು ಭಾಭಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯನ್ನು ತಿಳಿಸಿದ್ದಾರೆ.

ಗಾಯಗೊಂಡವರನ್ನು ಶಭೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ ಸುಖದರ್ ಗುಪ್ತಾ (28), ರವೀಂದ್ರ ಹರಿಹರ ಚುಮಾ (30), ರಾಮಸೇವಕ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್ರಂ ಕಾಂಗೇ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಎಂದು ಗುರುತಿಸಲಾಗಿದೆ. ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19) ಮತ್ತು ನೂರ್ ಮೊಹಮ್ಮದ್ ಶೇಖ್ (18) ಎಂದು ಅಧಿಕಾರಿ ತಿಳಿಸಿದ್ದಾರೆ.

ಕಳೆದ ಜುಲೈನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಉತ್ತರ ಪ್ರದೇಶದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 121 ಮಂದಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಜುಲೈ 2ರಂದು ಉತ್ತರ ಪ್ರದೇಶದ ಹತ್ರಾಸ್‌ದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಆಯೋಜಿಸಿದ್ದ ಸತ್ಸಂಗದ ವೇಳೆ ಈ ಕಾಲ್ತುಳಿತ ನಡೆದಿತ್ತು.

ಇದಾದ ಬಳಿಕ ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಾಲಯವೊಂದರಲ್ಲಿ ನಸುಕಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿದ್ದರು. ಬಾರಾವರ್ ಬೆಟ್ಟಗಳಲ್ಲಿರುವ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದರು.

ಈ ಸುದ್ದಿಯನ್ನೂ ಓದಿ: Terror attack : 15 ದಿನಗಳಲ್ಲಿ19 ಸಾವು: ಜಮ್ಮು, ಕಾಶ್ಮೀರ ಚುನಾವಣೆ ನಂತರ ಭಯೋತ್ಪಾದಕ ದಾಳಿ ಹೆಚ್ಚಳ