ಢಾಕಾ: ಸದಾ ಡೊಗ್ಗು ಸಲಾಮು ಹೊಡೆಯುತ್ತ, ಕೊಟ್ಟಿದ್ದನ್ನು ತಿನ್ನುತ್ತ ನಿಯತ್ತಿನ ನಾಯಿಯಂತೆ ಇದ್ದ ಬಾಂಗ್ಲಾದೇಶ (Bangladesh) ಈಗ ಭಾರತಕ್ಕೇ ಗುರ್ ಅನ್ನುತ್ತಿದೆ. ಪಾಕಿಸ್ತಾನದ ದಬ್ಬಾಳಿಕೆಯಿಂದ, ಕ್ರೌರ್ಯದಿಂದ ನರಳುತ್ತಿದ್ದ ಅಲ್ಲಿಯ ನಿವಾಸಿಗಳನ್ನು ಪಾರು ಮಾಡಿದ್ದು, ಆಸರೆ ಕೊಟ್ಟಿದ್ದು ಭಾರತ. ಪಾಕಿಸ್ತಾನದ ಸೈನಿಕರನ್ನು ಓಡಿಸಿ ಬಾಂಗ್ಲಾದೇಶ ಎಂಬ ದೇಶ ಸೃಷ್ಟಿ ಮಾಡಿ ಕೊಟ್ಟಿದ್ದೇ ಭಾರತ. ಆದರೆ ಈಗ ಅದೇ ಬಾಂಗ್ಲಾದೇಶದ ಜನ ಮತಾಂಧರಾಗಿ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ. ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ಅಲ್ಲಿಯ ಹಿಂದೂಗಳ ಮೇಲೆ, ಮಂದಿರಗಳ ಮೇಲೆ ಅಮಾನುಷ ದಾಳಿ ನಡೆಸುತ್ತಿದ್ದಾರೆ.
ತನ್ನ ಹುಟ್ಟು ಮತ್ತು ಬೆಳವಣಿಗೆಗೆ ಕಾರಣವಾದ ಆಪದ್ಭಾಂಧವ ಭಾರತದ ಚಾರಿತ್ರಿಕ ನೆರವಿನ ಋಣವನ್ನು ಮರೆತು, ಒಂದು ಕಾಲದ ತನ್ನ ಶತ್ರುವಾಗಿದ್ದ ಪಾಕಿಸ್ತಾನವನ್ನು ಅಲ್ಲಿಯ ಜನ ಹಿಂಬಾಲಿಸುತ್ತಿದ್ದಾರೆ. ಇದಕ್ಕೆ ಏಕೈಕ ಕಾರಣ ಇಸ್ಲಾಂ ಮತಾಂಧತೆ.
ಬಾಂಗ್ಲಾದೇಶದ ಸಂವಿಧಾನದ ಪ್ರಕಾರ ಇಸ್ಲಾಮ್ ಅಲ್ಲಿನ ರಾಷ್ಟ್ರೀಯ ಮತ. ಸಂವಿಧಾನದಿಂದ ಇತ್ತೀಚೆಗೆ ಸೆಕ್ಯುಲರ್ ಪದವನ್ನು ತೆಗೆದು ಹಾಕಲಾಗಿದೆ. ಕೇವಲ ಅಷ್ಟಾಗಿದ್ದರೆ ಅಂಥದ್ದೇನಿದೆ ಎನ್ನಬಹುದಿತ್ತು. ಆದರೆ ಅದು ಹಲವಾರು ಪ್ರಮಾದಗಳನ್ನು ಎಸಗುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯದ ಚಿಂತೆಗೆ ಕಾರಣವಾಗಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಸಂಬಂಧಗಳು ಹತ್ತಿರವಾದರೆ, ಭಾರತದ ಭದ್ರತೆ ಮತ್ತು ವ್ಯೂಹಾತ್ಮಕ ಕಾರಣಗಳಿಗೆ ಕಳವಳಕಾರಿ ಸಂಗತಿಯಾಗುತ್ತದೆ. ಉದಾಹರಣೆಗೆ ಕರಾಚಿಯಿಂದ ಬಾಂಗ್ಲಾದ ಚಿಟ್ಟಗಾಂಗ್‌ಗೆ ನೇರವಾಗಿ ಸಮುದ್ರ ಮಾರ್ಗ ಏರ್ಪಡುವುದರಿಂದ ಬಂಗಾಳ ಕೊಲ್ಲಿಗೆ ಪಾಕಿಸ್ತಾನದ ಸರಾಗ ಎಂಟ್ರಿ ಸಾಧ್ಯವಾಗುತ್ತದೆ.
ಬಾಂಗ್ಲಾದೇಶದಲ್ಲಿ ಮಹಮ್ಮದ್ ಯೂನುಸ್ ಖಾನ್ ನೇತೃತ್ವದ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಅವರು ಇಸ್ಲಾಮಿಕ್ ಮೂಲಭೂತವಾದಿಗಳ ಕೈಗೊಂಬೆಯಾಗುತ್ತಿದ್ದಾರೆಯೇ, ಇದಕ್ಕೆಲ್ಲ ಚೀನಾದ ಕುಮ್ಮಕ್ಕೂ ಇದೆಯೇ ಎಂಬ ಕಳವಳ ಈಗ ಉಂಟಾಗಿದೆ. ಬಾಂಗ್ಲಾದೇಶದ ಹಲವಾರು ನೀತಿಗಳು ಈಗ ಕಳೆದ ಐವತ್ತು ವರ್ಷದಲ್ಲೇ ಕಂಡರಿಯದಂತೆ ಬದಲಾಗಿವೆ.
ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಈಗ ಚಿಂತಾಜನಕವಾಗಿದೆ. ಸುಮಾರು 1 ಕೋಟಿ 30 ಲಕ್ಷ ಹಿಂದೂಗಳು ಅಲ್ಲಿದ್ದು, ಅಲ್ಪಸಂಖ್ಯಾತರ ಪೈಕಿ ಹಿಂದೂಗಳೇ ಹೆಚ್ಚು.
ಪ್ರವಾಹ ಸಂದರ್ಭ ಜನರಿಗೆ ನೆರವಿನ ಹಸ್ತ ಚಾಚಿದ್ದ ಇಸ್ಕಾನ್‌ನಂತಹ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆ ಎಂದು ಕರೆಯಲಾಗುತ್ತಿದೆ. ಹಸೀನಾ ನಿರ್ಗಮನದ ಬಳಿಕ ಬಾಂಗ್ಲಾದೇಶದ ಜೈಲುಗಳಿಂದ 700ಕ್ಕೂ ಹೆಚ್ಚು ಕೈದಿಗಳು, ಶಂಕಿತ ಉಗ್ರರು ಪರಾರಿಯಾಗಿದ್ದಾರೆ. ಅರಾಜಕತೆಯ ಪರಿಣಾಮ ಬಾಂಗ್ಲಾದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತಿದೆ.
ಮಹಮ್ಮದ್ ಯೂನುಸ್ ನೇತೃತ್ವದ ಸರ್ಕಾರ ಇಸ್ಲಾಂ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿದ್ದು, ಅಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ಲೂಟಿ, ದೌರ್ಜನ್ಯಗಳು ಮಾನವೀಯತೆಯ ಮೇಲಿನ ದಾಳಿಯಾಗಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶ ಇತ್ತೀಚೆಗೆ ಹೇಗೆ ಪಾಕಿಸ್ತಾನಕ್ಕೆ ಹತ್ತಿರವಾಗಲು ಯತ್ನಿಸುತ್ತಿದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಮೊದಲ ಬಾರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ಪಿತಾಮಹ ಮಹಮ್ಮದ್ ಆಲಿ ಜಿನ್ನಾ ಅವರ ಸಾವಿನ ವರ್ಷಾಚರಣೆಯನ್ನು ಢಾಕಾದ ನ್ಯಾಶನಲ್ ಪ್ರೆಸ್ ಕ್ಲಬ್‌ನಲ್ಲಿ ಆಚರಿಸಲಾಗಿತ್ತು.
1971ರ ಬಾಂಗ್ಲಾದೇಶ ವಿಮೋಚನಾ ಸಮರದ ಬಳಿಕ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ-ಪಾಕಿಸ್ತಾನ ನಡುವೆ ಹಡಗುಗಳ ನೇರ ಸಂಚಾರ ಶುರುವಾಗಿದೆ. ನವೆಂಬರ್ 13ರಂದು ಪಾಕಿಸ್ತಾನದ ಕರಾಚಿಯಿಂದ ಬಾಂಗ್ಲಾದೇಶದ ಚಿಟ್ಟಗಾಂಗ್‌ಗೆ ನೇರವಾಗಿ ಸಮುದ್ರ ಮಾರ್ಗ ಮುಕ್ತವಾಗಿದೆ. ಸರಕು ಸಾಗಣೆಯ ಹಡಗು ಸಂಚರಿಸಿದೆ. ಸಾಮಾನ್ಯವಾಗಿ ಶ್ರೀಲಂಕಾ ಮಾರ್ಗವಾಗಿ ಪಾಕ್ ಹಡಗುಗಳು ಬಾಂಗ್ಲಾಕ್ಕೆ ಹೋಗುತ್ತಿದ್ದವು. ಇಂಥ ಮತ್ತಷ್ಟು ವಿನಿಮಯಗಳು ನಡೆಯಲಿವೆ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.
ಇಲ್ಲಿ ಪ್ರಶ್ನೆ ಏನೆಂದರೆ ಇದುವರೆಗೆ ಏಕೆ ನೇರ ಸಮುದ್ರ ಮಾರ್ಗ ಮುಕ್ತವಾಗಿರಲಿಲ್ಲ? ಮತ್ತು ಈಗ ಏಕೆ ಆರಂಭವಾಗಿದೆ? ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ನೇತೃತ್ವದ ಆಡಳಿತ ಇದ್ದಾಗ ಇದನ್ನೆಲ್ಲ ಯೋಚಿಸಲೂ ಸಾಧ್ಯವಿರಲಿಲ್ಲ. ಆದರೆ ಈಗ ಪಾಕಿಸ್ತಾನ ಪರ ಶಕ್ತಿಗಳು ಬಾಂಗ್ಲಾದೇಶದ ಅಧಿಕಾರಶಾಹಿ ವ್ಯವಸ್ಥೆ, ನಾಗರಿಕ ಆಡಳಿತ, ಸಶಸ್ತ್ರ ಪಡೆ, ಸಿವಿಲ್ ಸೊಸೈಟಿಗಳಲ್ಲಿ ನುಸುಳಿದ್ದು, ಇಡೀ ದೇಶವನ್ನು ಪಾಕಿಸ್ತಾನಕ್ಕೆ ಹತ್ತಿರವಾಗಿಸುತ್ತಿವೆ. ಇದರ ಪರಿಣಾಮ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ.
ಅವಾಮಿ ಲೀಗ್‌ನ ನಾಯಕಿ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿದ್ದಾಗ 1971ರ ಯುದ್ಧ ಮತ್ತು ನರಮೇಧಕ್ಕೆ ಪಾಕಿಸ್ತಾನ ಅಧಿಕೃತವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಪಾಕಿಸ್ತಾನ ಪರ ನಿಂತಿದ್ದ ರಜಾಕರನ್ನು ವಿಚಾರಣೆಗೆ ಒಳಪಡಿಸಿದ್ದರು. ಜತೆಗೆ ಪಾಕಿಸ್ತಾನ ಪರ ಇದ್ದ ಜಮಾತೆ ಇಸ್ಲಾಮಿ ಪಕ್ಷವನ್ನು ನಿಷೇಧಿಸಿದ್ದರು. ಆದರೆ ಈಗಿನ ಹಂಗಾಮಿ ಸರ್ಕಾರವು ಜಮಾತೆ ಇಸ್ಲಾಮಿಯ ಮೇಲಿನ ನಿಷೇಧವನ್ನು ರದ್ದುಪಡಿಸಿದೆ. ಮಹಮ್ಮದ್ ಯೂನುಸ್ ಸರ್ಕಾರವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದ 8 ರಾಷ್ಟ್ರೀಯ ರಜಾ ದಿನಗಳನ್ನೂ ರದ್ದುಪಡಿಸಿದೆ.
ಹಸೀನಾ ನಿರ್ಗಮನವಾಗುತ್ತಿದ್ದಂತೆ ಬಾಂಗ್ಲಾದೇಶವು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು, ಯುದ್ಧ ಟ್ಯಾಂಕರ್, 40 ಟನ್ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ನಡುವೆ ಢಾಕಾ ಯೂನಿವರ್ಸಿಟಿಯ ಪ್ರೊಫೆಸರ್ ಡಾ. ಶಾಹಿದ್‌ಉಝಾಮನ್ ಅವರು, ಪಾಕಿಸ್ತಾನದ ಜತೆಗೆ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುವುದು ಭಾರತದ ವಿರುದ್ಧ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡಿರುವ ವಿಡಿಯೊ ವೈರಲ್ ಆಗಿದೆ.
ಶೇಖ್ ಹಸೀನಾ ಆಡಳಿತದ ಅವಧಿಯಲ್ಲಿ ಅದಾನಿ ಗ್ರೂಪ್ ಜತೆಗೆ ವಿದ್ಯುತ್ ಖರೀದಿಸುವ ಒಪ್ಪಂದ ನಡೆದಿತ್ತು. ಅದನ್ನು ಯೂನಸ್ ಸರ್ಕಾರ ರದ್ದುಪಡಿಸಿದೆ. ಬಾಂಗ್ಲಾದ ಆರ್ಥಿಕತೆ ದುರ್ಬಲವಾಗುತ್ತಿರುವುದಕ್ಕೆ ಇದೂ ಒಂದು ಸಾಕ್ಷಿಯಾಗಿದೆ.
ಪಾಕಿಸ್ತಾನವು ಇತ್ತೀಚೆಗೆ ಬಾಂಗ್ಲಾದೇಶೀಯರಿಗೆ ಬಿಸಿನೆಸ್ ಮತ್ತು ಇತರ ಕೆಲ ಕೆಟಗರಿಗಳಲ್ಲಿ ವೀಸಾ ಇಲ್ಲದೆಯೂ ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಮತಿ ನೀಡಿದೆ. ಬಾಂಗ್ಲಾದೇಶದಲ್ಲಿ ಪ್ರಾಣ ಬೆದರಿಕೆ ಬಂದ ಬಳಿಕ ಭಾರತದಲ್ಲಿ ಆಶ್ರಯ ಪಡೆದಿರುವ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಅವರು, ಇಸ್ಲಾಂ ಮೂಲಭೂತವಾದಿಗಳು ಬಾಂಗ್ಲಾದೇಶವನ್ನು ಮತ್ತೊಂದು ಅಫ್ಘಾನಿಸ್ತಾನವನ್ನಾಗಿಸಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಬಾಂಗ್ಲದೇಶದ ಯುವಜನತೆಯಲ್ಲಿ ಹಿಂದೂ ವಿರೋಧಿ, ಭಾರತ ವಿರೋಧಿ ನೀತಿಗಳನ್ನು ಹೇರಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಇದರ ಪರಿಣಾಮ ಅಲ್ಲಿನ ಸಮಾಜ ಪಾಕ್ ಪರ, ಜಿಹಾದಿ ಪರವಾಗುತ್ತಿದೆ ಎಂದು ವಿವರಿಸಿದ್ದಾರೆ.
ಬಾಂಗ್ಲಾದೇಶ ಈಗ ಉಂಡ ಮನೆಗೆ ಹೇಗೆ ದ್ರೋಹ ಎಸಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಬೇಕು. ಭಾರತ ಮತ್ತು ಪಾಕಿಸ್ತಾನ 1947ರಲ್ಲಿ ವಿಭಜನೆಯಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದಾಗ, ಈಗಿನ ಬಾಂಗ್ಲಾದೇಶ ಅಸ್ತಿತ್ವದಲ್ಲೇ ಇದ್ದಿರಲಿಲ್ಲ. 1947ರಿಂದ 1955ರ ತನಕ ಈ ಭೂಭಾಗವನ್ನು East Bengal ಅಥವಾ ಪೂರ್ವ ಬಂಗಾಳ ಎಂದು ಕರೆಯಲಾಗುತ್ತಿತ್ತು. ಹಾಗೂ ಅದು ಪಾಕಿಸ್ತಾನದ ಪ್ರಾಂತ್ಯವಾಗಿತ್ತು. 1955ರಿಂದ 1971ರ ತನಕ ಪೂರ್ವ ಪಾಕಿಸ್ತಾನ ಎಂದು ಮರು ನಾಮಕರಣವಾಯಿತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ರಾಷ್ಟ್ರೀಯವಾದಿಗಳು ಪಾಕಿಸ್ತಾನದ ದುರಾಡಳಿತದಿಂದ ವಿಮೋಚನೆಗೊಂಡು ಸ್ವತಂತ್ರ ಬಾಂಗ್ಲಾದೇಶ ರಚನೆಗೆ ಹೋರಾಟ ನಡೆಸಿದರು. ಈ ಸಂಗ್ರಾಮವನ್ನು ಹತ್ತಿಕ್ಕಲು ಪಾಕಿಸ್ತಾನ ಮಿಲಿಟರಿ ಬಲವನ್ನು ಪ್ರಯೋಗಿಸಿತ್ತು. 1971ರಲ್ಲಿ ಘೋರ ನರಮೇಧವೇ ಸಂಭವಿಸಿತು. ಪಾಕ್ ಸೇನಾಪಡೆಯು ಸ್ಥಳೀಯ ರಜಾಕರ ಬೆಂಬಲದೊಂದಿಗೆ ನಡೆಸಿದ ನರಮೇಧದಲ್ಲೂ ಲಕ್ಷಾಂತರ ಮಂದಿ ಹತರಾದರು.
ಈ ಬಿಕ್ಕಟ್ಟಿನ ಸಂದರ್ಭ ಭಾರತ ಮಧ್ಯಪ್ರವೇಶಿಸಲೇಬೇಕಾದ ಸನ್ನಿವೇಶ ಉಂಟಾಯಿತು. ಏಕೆಂದರೆ ಪಾಕ್ ಸೇನಾಪಡೆಯ ದೌರ್ಜನ್ಯದ ಪರಿಣಾಮ, ಬಾಂಗ್ಲಾದೇಶದಿಂದ ಲಕ್ಷಾಂತರ ಮಂದಿ ನಿರಾಶ್ರಿತರು ಭಾರತಕ್ಕೆ ನುಸುಳುತ್ತಿದ್ದರು. ಇದರಿಂದ ದೇಶದ ಆರ್ಥಿಕತೆಗೆ ಕೂಡ ಸಂಕಷ್ಟವಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಪಾಕಿಸ್ತಾನದ ವಿರುದ್ಧ ಯುದ್ಧವನ್ನು ಸಾರುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. 1971ರಲ್ಲಿ ಇಂದಿರಾಗಾಂಧಿಯವರು ಸೇನಾಪಡೆಯ ಮುಖ್ಯಸ್ಥ ಜನರಲ್ ಫೀಲ್ಡ್ ಮಾರ್ಶಲ್ ಮಾಣಿಕ್ ಷಾ ಅವರಿಗೆ ಪೂರ್ವ ಪಾಕಿಸ್ತಾನಕ್ಕೆ ಸೇನೆಯೊಂದಿಗೆ ತೆರಳಿ ಸಮರ ನಡೆಸಲು ಆದೇಶಿಸಿದರು. ಈ ಯುದ್ಧದಲ್ಲಿ ಸೇನಾಪಡೆಯ ಮೂರೂ ವಿಭಾಗಗಳು ಭಾಗವಹಿಸಿದ್ದವು. 1971ರ ಡಿಸೆಂಬರ್ 3ರಂದು ಆರಂಭವಾದ ಐತಿಹಾಸಿಕ ಬಾಂಗ್ಲಾ ವಿಮೋಚನಾ ಯುದ್ಧ ಡಿಸೆಂಬರ್ 16ರಂದು ಅಧಿಕೃತವಾಗಿ ಮುಕ್ತಾಯವಾಯಿತು. ಯುದ್ಧದಲ್ಲಿ ಪಾಕಿಸ್ತಾನದ 93,000 ಯೋಧರು ಭಾರತೀಯ ಸೇನೆಗೆ ಶರಣಾಗತರಾದರು. ಅಂದು ಸಜೆ 4.55ಕ್ಕೆ ಪಾಕಿಸ್ತಾನ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ನಿಯಾಜಿ ಅವರು ಭಾರತೀಯ ಸೇನೆಗೆ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿದರು. ಎರಡನೇ ಜಾಗತಿಕ ಯುದ್ಧದ ಬಳಿಕ ಅತಿ ದೊಡ್ಡ ಶರಣಾಗತಿ ಇದಾಗಿತ್ತು. ಇದರೊಂದಿಗೆ ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶವಾಗಿ ಸ್ವತಂತ್ರ ಗಳಿಸಿತು. ಈ ಯುದ್ಧದ ಪರಿಣಾಮ ಪಾಕಿಸ್ತಾನಕ್ಕೆ ಹೀನಾಯ ಸೋಲಾಯಿತು. ಜತೆಗೆ ಉಪಖಂಡದಲ್ಲಿ ಭಾರತದ ಪ್ರಾಬಲ್ಯ ವೃದ್ಧಿಸಿತು.
ಸ್ವತಂತ್ರ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೂ, ಪಾಕಿಸ್ತಾನಕ್ಕೆ ಹೋಲಿಸಿದರೆ ಬಾಂಗ್ಲಾದೇಶ ಪ್ರಗತಿಪರವಾಗಿತ್ತು. ಭಾರತದ ಜತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿತ್ತು. ಭಾರತವೂ ಹಲವಾರು ರೀತಿಯಲ್ಲಿ ಬಾಂಗ್ಲಾದೇಶದ ಬೆಳವಣಿಗೆಗೆ ಸಹಕರಿಸಿತ್ತು. ಲಕ್ಷಾಂತರ ಡಾಲರ್ ಸಾಲದ ನೆರವನ್ನೂ ನೀಡಿತ್ತು. ಮೂಲಸೌಕರ್ಯ, ಡಿಜಿಟಲ್ ತಂತ್ರಜ್ಞಾನ, ರಕ್ಷಣೆ, ಗಡಿ ನಿರ್ವಹಣೆ, ಇಂಧನ ಇತ್ಯಾದಿ ವಲಯಗಳಲ್ಲಿ ಭಾರತದ ನೆರವನ್ನು ಬಾಂಗ್ಲಾ ಪಡೆದಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭವೂ ಭಾರತವು ಬಾಂಗ್ಲಾದೇಶಕ್ಕೆ 70 ಲಕ್ಷ ಡೋಸ್ ಲಸಿಕೆಗಳನ್ನು ಕೊಟ್ಟಿತ್ತು. ಇಷ್ಟೆಲ್ಲಾ ನೆರವನ್ನು ಪಡೆದಿದ್ದರೂ, ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ಸಮಸ್ಯೆಯನ್ನು ಭಾರತ ಎದುರಿಸುತ್ತಿದೆ. ಇದರ ಜತೆಗೆ ಇದೀಗ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿರುವ ಬಾಂಗ್ಲಾದೇಶದ ಅರಾಜಕತೆ ಮತ್ತಷ್ಟು ಹೊಸ ಸವಾಲಾಗಿದೆ.
ಭಾರತ ಈಗ ಮಿಲಿಟರಿ ಬಲ, ಆರ್ಥಿಕತೆ, ವಿದೇಶಾಂಗ ನೀತಿಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದೆ. ಹೀಗಾಗಿ ಬಾಂಗ್ಲಾದೇಶದಿಂದ ಎದುರಾಗಬಹುದಾದ ಸವಾಲುಗಳನ್ನು ಮತ್ತಷ್ಟು ಸಶಕ್ತವಾಗಿ ಎದುರಿಸಬಹುದು. ಭಾರತದ ಜತೆಗಿನ ಸಂಬಂಧವನ್ನು ಉಳಿಸಿಕೊಳ್ಳದಿದ್ದರೆ, ಅದರಿಂದ ಬಾಂಗ್ಲಾದೇಶಕ್ಕೇ ಹಾನಿಯೇ ಹೊರತು, ಭಾರತಕ್ಕಲ್ಲ. ಆದರೂ, ನೆರೆಯ ರಾಷ್ಟ್ರವೊಂದರ ಇಂಥ ಪತನ ಒಳ್ಳೆಯದಲ್ಲ.
ಈ ಸುದ್ದಿಯನ್ನೂ ಓದಿ: Chinmoy Krishna Das: ಚಿನ್ಮಯ್ ಕೃಷ್ಣ ದಾಸ್ ಅವರನ್ನು ಕೂಡಲೇ ರಿಲೀಸ್ ಮಾಡಿ; ಬಾಂಗ್ಲಾ ಸರ್ಕಾರಕ್ಕೆ ಶೇಕ್ ಹಸೀನಾ ಆಗ್ರಹ