Thursday, 26th December 2024

Bangladesh: ಬಾಂಗ್ಲಾ ರಾಜಕಾರಣಿಯಿಂದ ಭಾರತೀಯ ವಸ್ತುಗಳ ಬಹಿಷ್ಕಾರಕ್ಕೆ ಕರೆ; ಬೆಡ್‌ಶೀಟ್‌ ದಹಿಸಿ ಪ್ರತಿಭಟನೆ

Bangladesh

ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲಿನ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಭಾರತ ಹಾಗೂ ನೆರೆ ರಾಷ್ಟ್ರದ ನಡುವೆ ಸಂಬಂಧ ಹದಗೆಡುತ್ತಿದೆ. ಇದು ರಾಜತಾಂತ್ರಿಕತೆಯ ಮೇಲೂ ಪರಿಣಾಮ ಬೀರಿದೆ. ಇದೀಗ ಬಾಂಗ್ಲಾದ ಪ್ರಮುಖ ವಿರೋಧಿ ಪಕ್ಷವಾದ ಬಿಎನ್‌ಪಿ ಭಾರತದ ವಿರುದ್ಧ ಪ್ರತಿಭಟನೆ ನಡೆಸಿದೆ. ಈ ವೇಳೆ ಹಿರಿಯ ನಾಯಕರೊಬ್ಬರು ಭಾರತದಲ್ಲಿ (Boycott Indian Things) ತಯಾರಿಸಿದ ಬೆಡ್‌ಶೀಟ್ ಅನ್ನು ಸುಟ್ಟು ಹಾಕಿದ್ದಾರೆ.

ಮಂಗಳವಾರ ರಾಜಶಾಹಿ ನಗರದಲ್ಲಿ ನಡೆದ ‘ಭಾರತೀಯ ಉತ್ಪನ್ನಗಳ ಬಹಿಷ್ಕಾರ’ ಕಾರ್ಯಕ್ರಮದಲ್ಲಿ ಬಿಎನ್‌ಪಿಯ ಹಿರಿಯ ಜಂಟಿ ಕಾರ್ಯದರ್ಶಿ ಅಡ್ವೊಕೇಟ್ ರುಹುಲ್ ಕಬೀರ್ ರಿಜ್ವಿ (Ruhul Kabir Rizvi) ರಾಜಸ್ಥಾನದ ಜೈಪುರದಲ್ಲಿ ತಯಾರಿಸಲಾದ ಬೆಡ್‌ಶೀಟ್‌ಗೆ ಬೆಂಕಿ ಹಚ್ಚಿದ್ದಾರೆ.

ರುಹುಲ್ ಕಬೀರ್ ರಿಜ್ವಿ ಬೆಡ್‌ಶೀಟನ್ನು ಎತ್ತಿ ಹಿಡಿದು, ʼʼಈ ಬೆಡ್‌ಶೀಟ್ ರಾಜಸ್ಥಾನದ ರಾಜಧಾನಿ ಜೈಪುರದಿಂದ ಬಂದಿದೆ. ನಾವು ಭಾರತದ ಆಕ್ರಮಣವನ್ನು ಪ್ರತಿಭಟಿಸಲು ಇದನ್ನು ಮಾಡುತ್ತಿದ್ದೇವೆ” ಎಂದು ಘೋಷಿಸಿದರು. ನಂತರ ಬೆಡ್‌ಶೀಟ್ ಅನ್ನು ಬೀದಿಗೆ ಎಸೆದು ಅದನ್ನು ಸುಡುವಂತೆ ಪಕ್ಷದ ಸದಸ್ಯರಿಗೆ ಸೂಚಿಸಿದರು. ಬಿಎನ್‌ಪಿ ಕಾರ್ಯಕರ್ತರು ಬೆಡ್‌ಶೀಟ್‌ಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಯಲ್ಲಿ ನೆರೆದಿದ್ದ ಜನಸಮೂಹವು ಬಾಂಗ್ಲಾದೇಶ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಬೆಡ್‌ಶೀಟ್‌ಗಳನ್ನು ತುಳಿದಿದ್ದಾರೆ.

ಈ ದೇಶದ ಜನರಿಗೆ ಭಾರತದ ವಸ್ತುಗಳು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ನಾವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದೇವೆ, ಅವರ ಸ್ನೇಹ ಶೇಖ್ ಹಸೀನಾ ಅವರೊಂದಿಗೆ ಮಾತ್ರ ಎಂದು ರಿಜ್ವಿ ಪದಚ್ಯುತ ಬಾಂಗ್ಲಾದೇಶದ ಪ್ರಧಾನಿಯ ಕುರಿತು ಹೇಳಿದ್ದಾರೆ.

ರಿಜ್ವಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವುದು ಇದೇ ಮೊದಲಲ್ಲ. ಕಳೆದ ವಾರ ತಮ್ಮ ಪತ್ನಿಯ ಭಾರತ-ನಿರ್ಮಿತ ಸೀರೆಯನ್ನು ಸುಟ್ಟು ಹಾಕಿದ್ದರು. ಡಿ. 5ರಂದು ಢಾಕಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಇದು ಭಾರತೀಯ ಸೀರೆ. ಇದು ನನ್ನ ಹೆಂಡತಿಗೆ ಸೇರಿದ್ದು, ಅವಳೇ ಇದನ್ನು ಕೊಟ್ಟಿದ್ದಾಳೆ. ಇಂದು ನಾನು ಇದನ್ನು ನಿಮ್ಮ ಮುಂದೆ ಎಸೆಯುತ್ತಿದ್ದೇನೆ ಎಂದು ಅವರು ಹೇಳಿದರು. ಈ ವರ್ಷದ ಆರಂಭದಲ್ಲಿ, ಇದೇ ರೀತಿಯ ಪ್ರತಿಭಟನೆಯ ಭಾಗವಾಗಿ ಅವರು ಭಾರತೀಯ ಶಾಲನ್ನು ತಿರಸ್ಕರಿಸಿದ್ದರು.

ಈ ಸುದ್ದಿಯನ್ನೂ ಓದಿ : Illegal Bangladeshi immigrants: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 7 ಮಂದಿ ವಶ