Wednesday, 4th December 2024

Bangladesh Unrest: ಕೋರ್ಟ್‌ ವಿಚಾರಣೆಗೆ ಮುನ್ನವೇ ಚಿನ್ಮಯ್‌ ದಾಸ್‌ ಪರ ವಕೀಲನ ಮೇಲೆ ಡೆಡ್ಲಿ ಅಟ್ಯಾಕ್‌!

Bangladesh Unrest

ಢಾಕಾ : ಬಾಂಗ್ಲಾದೇಶದಲ್ಲಿ (Bangladesh Unrest) ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದೀಗ ಮತ್ತೊಂದು ಅಂತಹುದೇ ಪ್ರಕರಣ ದಾಖಲಾಗಿದ್ದು, ಚಿನ್ಮಯ್‌ ದಾಸ್‌ (Chinmoy Das Prabhu) ಅವರ ಪರ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

ಸೋಮವಾರ ಘಟನೆಯ ಬಗ್ಗೆ ಮಾತನಾಡಿದ ಇಸ್ಕಾನ್ ಕೋಲ್ಕತ್ತಾದ ವಕ್ತಾರ ರಾಧಾರಾಮ್ ದಾಸ್ (Radharamn Das) ಕೆಲವು ಕಿಡಿಗೇಡಿಗಳು ಸೇರಿ ವಕೀಲ ರಮೆಣ್ ರಾಯ್ ಅವರ ಮನೆ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ರಾಯ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ವಕೀಲರ ಮೇಲಿನ ಹಲ್ಲೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡ ಅವರು ಸದ್ಯ ರಾಯ್‌ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗಾಗಿ ದಯವಿಟ್ಟು ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ್ ಜೋಟೆಯ ವಕ್ತಾರರಾಗಿ ಸೇವೆ ಸಲ್ಲಿಸಿದ ಚಿನ್ಮಯ್ ದಾಸ್ ಅವರನ್ನು ಕಳೆದ ವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರ ಮೇಲೆ ದೇಶ ದ್ರೋಹದ ಕೇಸ್‌ ದಾಖಲಾಗಿತ್ತು. ನಂತರ ವಿಚಾರಣೆ ನಡೆಸಿದ ಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿತ್ತು. ಈ ನಡುವೆ ಶನಿವಾರ ಮತ್ತೊಬ್ಬ ಇಸ್ಕಾನ್‌ ಸದ್ಯರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತ ಸಂತನನ್ನು ಶ್ಯಾಮ್ ದಾಸ್ ಪ್ರಭು ಎಂದು ಗುರುತಿಸಲಾಗಿದ್ದು, ಅವರು ಜೈಲಿನಲ್ಲಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಭೇಟಿಯಾಗಲು ಹೋಗಿದ್ದರು ಎಂದು ತಿಳಿದು ಬಂದಿದೆ. ಯಾವುದೇ ಅಧಿಕೃತ ವಾರಂಟ್ ಇಲ್ಲದೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೋಲ್ಕತ್ತಾದ ವಕ್ತಾರ ರಾಧಾ ರಾಮ್ ದಾಸ್ ಪೋಸ್ಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ :Chinmoy Krishna Das Brahmachari: ಬಾಂಗ್ಲಾದಲ್ಲಿ ಅರೆಸ್ಟ್‌ ಆಗಿರೋ ಚಿನ್ಮೋಯ್‌ ದಾಸ್‌ ಅವರನ್ನೇ ಉಚ್ಚಾಟಿಸಿದ ಇಸ್ಕಾನ್‌! ಅನೇಕರಿಂದ ವಿರೋಧ