Thursday, 28th November 2024

Bangladesh Unrest: ಬಾಂಗ್ಲಾದಲ್ಲಿ ಇಸ್ಕಾನ್ ನಿಷೇಧ ವಿಚಾರ; ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

Dhaka High Court

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡ ಚಿನ್ಮೋಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರ ಬಂಧನದ ಬೆನ್ನಲ್ಲೇ ಕೇಳಿಬಂದಿರುವ ದೇಶಾದ್ಯಂತ ಇಸ್ಕಾನ್‌ ದೇವಾಲಯಗಳನ್ನು ನಿಷೇಧಿಸಬೇಕೆಂಬ ಮನವಿಯನ್ನು ಢಾಕಾ ಹೈಕೋರ್ಟ್‌ ತಿರಸ್ಕರಿಸಿದೆ(Bangladesh Unrest). ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಚಿನ್ಮೋಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ದೇಶದ್ರೋಹ ಆರೋಪದ ಮೇಲೆ ಢಾಕಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದರ ನಡುವೆ ಬಾಂಗ್ಲಾದೇಶದಲ್ಲಿ ಇಸ್ಕಾನ್‌ (ISKCON) ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಢಾಕಾ ಹೈಕೋರ್ಟ್‌ (Dhaka High Court) ಇದನ್ನು ನಿರಾಕರಿಸಿದೆ. ಈಗಾಗಲೇ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ, ನಿಷೇಧಗೊಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.

ಬಾಂಗ್ಲಾದೇಶ ತೊರೆದು ಭಾರತಕ್ಕೆ ಬರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಚಿನ್ಮೋಯ್‌ ದಾಸ್‌ ಅವರನ್ನು ಸರ್ಕಾರದ ಸೂಚನೆ ಮೇರೆಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು. ಬಳಿಕ ಪೊಲೀಸರು ಬಂಧಿಸಿದ್ದಾರೆ. ಬಳಿಕ ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಅವರಿಗೆ ಜಾಮೀನು ನಿರಾಕರಣೆಯಾಗಿದೆ.

ಸುಪ್ರೀಂ ಕೋರ್ಟ್‌ ವಕೀಲ ಎಂಡಿ ಮೊನೀರ್‌ ಉದ್ದೀನ್‌ ಅವರು ಇಸ್ಕಾನ್‌ ಚಟುವಟಿಕೆಗಳ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದ್ದ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು ಮತ್ತು ಚಟ್ಟೋಗ್ರಾಮ್, ರಂಗ್‌ಪುರ ಮತ್ತು ದಿನಾಜ್‌ಪುರದಲ್ಲಿ ಇಸ್ಕಾನ್‌ಗೆ ನಿಷೇಧವನ್ನು ವಿಧಿಸಲು ಹಾಗೂ ಸೆಕ್ಷನ್ 144 ಅನ್ನು ಜಾರಿಗೊಳಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ನಂತರ ನ್ಯಾಯಾಲಯ ಇಸ್ಕಾನ್‌ಗೆ ಸಂಬಂಧಿಸಿದಂತೆ ಸರ್ಕಾರದ ಕ್ರಮಗಳನ್ನು ವರದಿ ಮಾಡಲು ಅಟಾರ್ನಿ ಜನರಲ್‌ಗೆ ಕೇಳಿತ್ತು. ವಕೀಲ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆ ಹಾಗೂ ಇಸ್ಕಾನ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದು, 33 ಮಂದಿಯನ್ನು ಬಂಧಿಸಲಾಗಿದೆ ಎಂದು ಗುರುವಾರ ಅಟಾರ್ನಿ ಜನರಲ್ ಕಚೇರಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಅರ್ಜಿಯಲ್ಲಿ ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ದೇಶದಲ್ಲಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಅನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್‌ ವಕೀಲರೊಬ್ಬರು ಅರ್ಜಿಯನ್ನು ಸಲ್ಲಿಸಿದ್ದರು. ಮಸೀದಿಗಳ ಮೇಲೆ ದಾಳಿ ಮಾಡಲು ಇಸ್ಕಾನ್ ಬಲವಂತವಾಗಿ ಸದಸ್ಯರನ್ನು ನೇಮಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಇಸ್ಕಾನ್ ಬಾಂಗ್ಲಾದೇಶದಲ್ಲಿ ಹೇಗೆ ಸ್ಥಾಪಿಸಲಾಯಿತು ಎಂಬುದರ ಕುರಿತು ಅಟಾರ್ನಿ ಜನರಲ್‌ಗೆ ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ಎಂಡಿ ಅಸಾದುಝಮಾನ್, ಈ ಸಂಘಟನೆಯು ರಾಜಕೀಯ ಪಕ್ಷವಲ್ಲ ಎಂದು ಹೇಳಿದರು. “ಇದೊಂದು ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದೆ. ಸರಕಾರವು ಈಗಾಗಲೇ ಅವುಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದರು. ನಂತರ ನ್ಯಾಯಾಧೀಶರು ಇಸ್ಕಾನ್‌ಗೆ ಸಂಬಂಧಿಸಿದಂತೆ ಸರ್ಕಾರದ ಕ್ರಮಗಳನ್ನು ವರದಿ ಮಾಡಲು ತಿಳಿಸಿದ್ದರು. ಇದೀಗ ಹೈ ಕೋರ್ಟ್‌ ಇಸ್ಕಾನ್‌ಗೆ ಸಂಬಂಧಿಸಿದ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ : Bangladesh Unrest: ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; 3 ಹಿಂದೂ ದೇವಾಲಯಗಳ ಮೇಲೆ ದಾಳಿ