Thursday, 12th December 2024

ಭಾಷೆಗಳ ನಡುವೆ ತಾರತಮ್ಯ ಮಾಡುವುದನ್ನು ನಿಲ್ಲಿಸಿ: ರಾಹುಲ್ ಗಾಂಧಿ

ನವದೆಹಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿನ ನರ್ಸ್ ಗಳಿಗೆ ಮಲೆಯಾಳಂನಲ್ಲಿ ಸಂಭಾಷಣೆ ನಡೆಸಬೇಡಿ, ಹಿಂದಿ ಅಥವಾ ಇಂಗ್ಲಿಷ್ ಮಾತ್ರ ಬಳಸಿ ಎಂದು ಸೂಚನೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಮಲೆಯಾಳಂ ಕೂಡ ಭಾರತೀಯ ಭಾಷೆ, ಭಾಷೆಗಳ ನಡುವೆ ತಾರತಮ್ಯ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

ದೆಹಲಿಯ ಆಸ್ಪತ್ರೆಗಳಲ್ಲಿ ಶೇ.60ರಷ್ಟು ನರ್ಸ್ ಗಳು ಕೇರಳ ಮೂಲದವರಾಗಿದ್ದು, ಅವರು ತಮ್ಮಲ್ಲಿ ಪರಸ್ಪರ ಮಲೆಯಾಳಂ ನಲ್ಲೇ ಸಂಭಾಷಣೆ ನಡೆಸುವುದರಿಂದ ರೋಗಿಗಳಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಮತ್ತು ಅನಾನುಕೂಲಕರವಾಗುತ್ತಿದೆ ಎಂಬ ಕಾರಣಕ್ಕೆ ಆರೋಗ್ಯ ಸಚಿವಾಲಯ ನರ್ಸ್ ಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಕೆ ಮಾಡಬೇಕು ಎಂದು ಸೂಚನೆ ನೀಡಿ ದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇರಳದಿಂದ ಸಂಸತ್ ಗೆ ಆಯ್ಕೆಯಾಗಿರುವ ರಾಹುಲ್ ಗಾಂಧಿ, ಮಲೆಯಾಳಂ ಪರ ಧ್ವನಿಯತ್ತಿ ದ್ದಾರೆ.

ಇತ್ತೀಚೆಗೆ ಕನ್ನಡ ಭಾಷೆಯನ್ನು ಗೂಗಲ್ ಸರ್ಚ್ ಇಂಜಿನ್ ಕೊಳಕು ಭಾಷೆ ಎಂದು ಅರ್ಥ ವಿವರಣೆ ನೀಡಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೆ ಕನ್ನಡ ಭಾವುಟಕ್ಕೆ ಅಗೌರವವಾಗುವಂತೆ ಅಮೆಜಾನ್ ಕಂಪೆನಿಗೆ ನಡೆದುಕೊಂಡಿದೆ.

ದಕ್ಷಿಣ ಭಾರತದ ಭಾಷೆಯ ಬಗ್ಗೆ ಪದೇ ಪದೇ ಅಗೌರವ ತೋರಿಸಲಾಗುತ್ತದೆ. ಇತ್ತೀಚೆಗೆ ಪ್ರಧಾನ ಮಂತ್ರಿ ಕಚೇರಿ ಮತ್ತು ಪ್ರಧಾನಿ ಅವರ ವೈಯಕ್ತಿಕ ಟ್ವಿಟರ್ ಖಾತೆಗಳು ಸಂಪೂರ್ಣ ಹಿಂದಿಮಯವಾಗಿವೆ.