Thursday, 12th December 2024

Benjamin Netanyahu: ಭಾರತದ ಹೆಮ್ಮೆ ಪುತ್ರ ರತನ್‌ ಟಾಟಾ ಅಗಲಿಕೆಗೆ ಇಸ್ರೇಲ್‌ ಪ್ರಧಾನಿ ಸಂತಾಪ

Ratan Tata

ನವದೆಹಲಿ: ಭಾರತೀಯ ಉದ್ಯಮದ ದಿಗ್ಗಜ ರತನ್ ಟಾಟಾ(Ratan Tata) ಅವರ ನಿಧನಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರು ಸಂತಾಪ ಸೂಚಿಸಿದ್ದು, ಅವರನ್ನು ಇಸ್ರೇಲ್ ಮತ್ತು ಭಾರತದ ನಡುವಿನ ಸ್ನೇಹದ ಚಾಂಪಿಯನ್ ಎಂದು ಕರೆದಿದ್ದಾರೆ.

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಬುಧವಾರ ಸಂಜೆ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ನೆತನ್ಯಾಹು, ಇಸ್ರೇಲ್-ಭಾರತ ಬಾಂಧವ್ಯವನ್ನು ಬೆಳೆಸುವಲ್ಲಿ ರತನ್ ಟಾಟಾ ಅವರ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ. “ನನ್ನ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿಯವರಿಗೆ. ನಾನು ಮತ್ತು ಇಸ್ರೇಲ್‌ನ ಅನೇಕರು ಭಾರತದ ಹೆಮ್ಮೆಯ ಪುತ್ರ ಮತ್ತು ನಮ್ಮ ಎರಡು ದೇಶಗಳ ನಡುವಿನ ಸ್ನೇಹದ ಚಾಂಪಿಯನ್ ರತನ್ ನೇವಲ್ ಟಾಟಾ ಅವರನ್ನು ಕಳೆದುಕೊಂಡಿದ್ದೇವೆ. ದಯವಿಟ್ಟು ರತನ್ ಅವರ ಕುಟುಂಬಕ್ಕೆ ನನ್ನ ಸಂತಾಪವನ್ನು ತಿಳಿಸಿ ಎಂದು ಪೋಸ್ಟ್‌ ಮಾಡಿದ್ದಾರೆ.

ಉದ್ಯಮಿ ರತನ್ ಟಾಟಾ (86) ಅವರು ಸುದೀರ್ಘ ಮತ್ತು ಪ್ರಸಿದ್ಧ ವೃತ್ತಿಜೀವನದ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಈಗ ಅವರ ನಂತರ ಅವರ ಸಹೋದರ ನೋಯೆಲ್ ಟಾಟಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ಟಾಟಾ ಅವರನ್ನು “ದೃಷ್ಠಿಯುಳ್ಳ ಉದ್ಯಮಿ ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ” ಎಂದು ಕರೆದಿದ್ದಾರೆ. ಇನ್ನು ವರ್ಲಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಉದ್ಯಮಿಯ ಅಂತಿಮ ಸಂಸ್ಕಾರ ನಡೆಸಲಾಯಿತು.

ಹಲವಾರು ಪ್ರಮುಖ ಉದ್ಯಮಿಗಳು ಹಾಗೂ ಪ್ರಮುಖ ರಾಜಕೀಯ ನಾಯಕರು ಸೇರಿದಂತೆ ದೇಶ ವಿದೇಶಗಳಿಂದ ರತನ್ ಟಾಟಾ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಗುರುವಾರ, ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರು ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಿದ್ದು, ಅವರನ್ನು ದೇಶದ ನಿಜವಾದ ಸ್ನೇಹಿತ ಎಂದು ಕರೆದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ರತನ್ ಟಾಟಾ ಅವರ ನಾವೀನ್ಯತೆ ಮತ್ತು ಉದ್ಯಮ ಕ್ಷೇತ್ರಕ್ಕೆ ಕೊಡುಗೆಗಳನ್ನು ಶ್ಲಾಘಿಸಿದರು, “ಫ್ರಾನ್ಸ್ ಭಾರತದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದೆ. ಅವರೊಬ್ಬ ಅತ್ಯದ್ಬುತ ಮಾನವತಾವಾದಿ, ಬಹುದೊಡ್ಡ ಪರೋಪಕಾರಿ ಎಂದು ಬಣ್ಣಿಸಿದ್ದಾರೆ.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ರತನ್ ಟಾಟಾ ಅವರ ಸಾಧನೆಗಳು ಮತ್ತು ಭಾರತ ಮತ್ತು ಜಗತ್ತಿಗೆ ಅವರ ಕೊಡುಗೆಯನ್ನು ಸ್ಮರಿಸಿದರು. “ರತನ್ ಟಾಟಾ ಅವರು ದೂರದೃಷ್ಟಿಯ ನಾಯಕರಾಗಿದ್ದರು, ಅವರ ಜನ ಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸಲು ಅವರ ಸಮರ್ಪಣೆ ಭಾರತ ಮತ್ತು ಪ್ರಪಂಚದ ಮೇಲೆ ಅಳಿಸಲಾಗದ ಹೆಗ್ಗುರತನ್ನು ಸೃಷ್ಟಿಸಿದೆ. ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು ಮತ್ತು ಅವರ ಉದ್ದೇಶ ಮತ್ತು ಮಾನವೀಯತೆಯ ಸೇವೆ ನನ್ನ ಮೇಲೆ ಭಾರೀ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Noel Tata: ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾದ ನೋಯೆಲ್ ಟಾಟಾ ಯಾರು? ರತನ್‌ಗೂ ಅವರಿಗೂ ಏನು ಸಂಬಂಧ