Thursday, 26th December 2024

BEST Bus Accident: ಬ್ರೇಕ್‌ ಫೇಲ್‌ ಆಗಿ ಪಾದಚಾರಿಗಳಿಗೆ ಬಸ್‌ ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

mumbai accident

ಮುಂಬೈ: ಎಲೆಕ್ಟ್ರಿಕ್‌ ಬಸ್ಸೊಂದು ಬ್ರೇಕ್‌ ಫೇಲ್‌ ಆಗಿ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ(BEST Bus Accident). ಸೋಮವಾರ ರಾತ್ರಿ ನಗರದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಸುಮಾರು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಕುರ್ಲಾದ ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದ್ದು, ಪೊಲೀಸರು ಬಸ್ ಚಾಲಕನನ್ನು ಅರೆಸ್ಟ್‌ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ, ಮಾರ್ಗ ಸಂಖ್ಯೆ 332 ರ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಯ ಬಸ್ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಮತ್ತು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬೆಸ್ಟ್ ಸಂಸ್ಥೆಯ ಬಸ್ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಬುದ್ಧ ಕಾಲೋನಿಯ ರೆಸಿಡೆನ್ಶಿಯಲ್ ಸೊಸೈಟಿಗೆ ಪ್ರವೇಶಿಸಿ ನಿಂತಿದೆ ಎಂದು ಅಧಿಕಾರಿ ತಿಳಿಸಿದರು.

ಬಸ್ ಕುರ್ಲಾ ರೈಲು ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಹತ್ತಿರದ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಅಪಘಾತಕ್ಕೂ ಮುನ್ನ ಬಸ್‌ ನಿಯಂತ್ರಣ ತಪ್ಪಿ ವೇಗವಾಗಿ ಅಡ್ಡಾದಿಡ್ಡಿ ಚಲಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಅದು ಭಾರೀ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನೂ ಓದಿ: Road Accident: ಕುಕ್ಕೆ ಸುಬ್ರಹ್ಮಣ್ಯದಿಂದ ಮರಳುತ್ತಿದ್ದ ದಂಪತಿ ಅಪಘಾತದಲ್ಲಿ ಬಲಿ, ಮಕ್ಕಳು ಅನಾಥ