ನವದೆಹಲಿ : ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ, ತೈಲ ಬೆಲೆ ಏರಿಕೆ ವಿರುದ್ಧ ಸೋಮ ವಾರ ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಪ್ರತಿಭಟನೆ ನಡೆಸುತ್ತಿದೆ.
ಪ್ರತಿಭಟನೆಯಿಂದಾಗಿ ದಹಲಿಯಿಂದ ಗುರುಗ್ರಾಮ್ ರಸ್ತೆಯ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಹೈರಾಣಾಗುವಂತೆ ಆಗಿದೆ. ಬಂದ್ ಹಿನ್ನಲೆಯಲ್ಲಿ ದೆಹಲಿ ಪ್ರವೇಶಿಸುವ ಪ್ರತಿಯೊಂದು ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದೆಹಲಿಯ ಒಳಗೆ ಪ್ರತಿಭಟನೆಗೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಸಿಂಘು ಗಡಿ ಸೇರಿದಂತೆ ದೆಹಲಿಯ ಗಡಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೂರು ಗಡಿ ಪ್ರದೇಶಗಳಲ್ಲಿಯೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಪ್ರತಿಭಟನಾ ಕಾರರು ದೆಹಲಿ ಪ್ರವೇಶಿಸದಂತೆ ತಡೆಯಲಾಗು ತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೂ ಸೆಡ್ಡು ಹೊಡೆದಿರುವ ರೈತರು ದೆಹಲಿಯ ಗಡಿ ಪ್ರದೇಶ ಗುರುಗ್ರಾಮ್ – ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿ ಮೆಟ್ರೊದ ಕೆಲವು ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಹರಿಯಾಣದ ಕುರುಕ್ಷೇತ್ರದಲ್ಲಿ ದೆಹಲಿ-ಅಮೃತಸರ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್-ಹರಿಯಾಣ ಶಂಭು ಗಡಿಯನ್ನು ಮುಚ್ಚಲಾಗಿದೆ.