Wednesday, 1st January 2025

Bhojpuri Singer: ಬಿಜೆಪಿ ವೇದಿಕೆಯಲ್ಲಿ ರಘುಪತಿ ರಾಘವ ಹಾಡು… ಭೋಜ್‌ಪುರಿ ಗಾಯಕಿ ವಿರುದ್ಧ ಭಾರೀ ಅಕ್ರೋಶ; ಕ್ಷಮೆಗೆ ಆಗ್ರಹ

ಪಾಟ್ನಾ: ಡಿಸೆಂಬರ್ 25 ರಂದು ಪಾಟ್ನಾದಲ್ಲಿ(Patna) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮದಿನದ ಸ್ಮರಣಾರ್ಥ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೋಜಪುರಿ ಜಾನಪದ ಗಾಯಕಿ(Bhojpuri Singer) ದೇವಿ ಅವರು ಮಹಾತ್ಮ ಗಾಂಧಿಯವರ ಭಜನೆ ಎನ್ನಲಾದ ‘ರಘುಪತಿ ರಾಘವ ರಾಜಾರಾಮ್ʼ ಹಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಗಾಯಕಿಯ ಎಡವಟ್ಟಿಗೆ ಆಕ್ರೋಶ ಭುಗಿಲೆದ್ದಿದ್ದು, ಹಲವರು ಪ್ರತಿಭಟನೆ ನಡೆಸಿ ಕ್ಷಮೆಯಾಚಿಸುವಂತೆ ಗಾಯಕಿಗೆ ಒತ್ತಾಯಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರ್‌ ವಾಜಪೇಯಿ ಜನ್ಮ ಶತಮಾನೋತ್ಸವದ ಪ್ರಯುಕ್ತ ಬಿಜೆಪಿ ಪಾಟ್ನಾದಲ್ಲಿ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ವೇದಿಕೆಯಲ್ಲಿ ಕೆಲವು ಗಂಟೆ ಭೋಜಪುರಿ ಗಾಯಕಿ ದೇವಿ ಅವರು ಕೆಲವು ಹಾಡುಗಳನ್ನು ಹಾಡಿದ್ದರು. ಇದರ ಮಧ್ಯೆ ರಾಮನ ಭಜನೆ ಗೀತೆಯಾದ ʼರಘುಪತಿ ರಾಘವ ರಾಜರಾಮ್‌ʼ ಹಾಡಿದ್ದಾರೆ. ಆದರೆ ಗಾಯಕಿ ದೇವಿ ಅವರು ಬಿಜೆಪಿ ವೇದಿಕೆಯಲ್ಲಿದ್ದೇನೆ ಎಂಬುದನ್ನು ಮರೆತು ʼಈಶ್ವರ ಅಲ್ಲಾ ತೇರೋ ನಾಮ್‌’ ಸಾಲನ್ನು ಸೇರಿಸಿ ಹಾಡಿದ್ದಾರೆ. ಇದರಿಂದ ಕಾರ್ಯಕ್ರಮದಲ್ಲಿದ್ದವರು ಸಿಟ್ಟಿಗೆದ್ದು ಗಾಯಕಿ ವಿರುದ್ಧ ಪ್ರತಿಭಟಿಸಿದ್ದಾರೆ. ಆಗ ಗಾಯಕಿ ಆ ಸಾಲನ್ನು ಬದಲಿಸಿ, “ಶ್ರೀ ರಘುನಂದನ್‌ ಜೈ ಸಿಯಾರಾಮ್‌’ ಎಂದು ಹಾಡಿದರೂ ಪ್ರತಿಭಟನೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಕಿ ಪ್ರತಿಕ್ರಿಯೆ

ಈ ಘಟನೆ ಕುರಿತು ಮುಂಬೈನಲ್ಲಿ ಪ್ರತಿಕ್ರಿಯೆ ನೀಡಿರುವ ಜಾನಪದ ಗಾಯಕಿ ದೇವಿ, ನಾನು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇನೆ. ನಾನು ಮಹಾತ್ಮಾಗಾಂಧಿಯವರ ನೆಚ್ಚಿನ ಭಜನೆಯನ್ನು ಹಾಡುತ್ತಿದ್ದೆ. ಬಿಹಾರ ಸಿಎಂ ವಿಜಯ್ ಸಿನ್ಹಾ ಮತ್ತು ಅಶ್ವಿನಿ ಚೌಬೆ ಸೇರಿದಂತೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಅಲ್ಲಿದ್ದರು. ಕೆಲವು ಜನರು ಈಶ್ವರ್ ಅಲ್ಲಾ ತೇರೋ ನಾಮ್ ಎಂಬ ಸಾಲು ಹೇಳುತ್ತಿದ್ದಂತೆ ಪ್ರತಿಭಟಿಸಿದರು. ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿತು ಎಂದು ಹೇಳಿದ್ದಾರೆ.

ಈ ವೇಳೆ ವೇದಿಕೆಯ ಮೇಲಿದ್ದ ನಾಯಕರಿಗೆ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯಲಿಲ್ಲ. ಹೀಗಾಗಿ ಅವರು ನನ್ನ ಬಳಿ ಬಂದು, ನೀವೇ ಕ್ಷಮೆಯಾಚಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕು ಎಂದು ಮನವಿ ಮಾಡಿದರು. ಹೀಗಾಗಿ ನಾನು ಕ್ಷಮೆಯಾಚಿಸಿದ್ದೇನೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದ ವೇಳೆ ಸ್ಥಳದಲ್ಲಿ ಅವ್ಯವಸ್ಥೆ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಟಲ್ ಬಿಹಾರಿ ಅವರ ಜನ್ಮದಿನದಂದು ಇಂತಹ ನೀಚ ಕೃತ್ಯ ಸರಿಯಲ್ಲ. ಇಂತಹವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಗಾಯಕಿ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Canadian Plane Fire: ದ.ಕೊರಿಯಾ ಬೆನ್ನಲ್ಲೇ ಕೆನಡಾದಲ್ಲೂ ಭಾರೀ ವಿಮಾನ ದುರಂತ-ಲ್ಯಾಂಡಿಂಗ್‌ ವೇಳೆ ಬೆಂಕಿ!