Friday, 1st November 2024

Bibek Debroy: ಪ್ರಧಾನಿ ಮೋದಿಯ ಆರ್ಥಿಕ ಸಲಹೆಗಾರ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಬಿಬೇಕ್ ದೆಬ್ರಾಯ್‌ ವಿಧಿವಶ

bibek debroy

ನವದೆಹಲಿ: ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಬಿಬೇಕ್ ದೆಬ್ರಾಯ್‌(Bibek Debroy) ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡೆಬ್ರಾಯ್ ಈ ಹಿಂದೆ ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ (ಜಿಐಪಿಇ) ಯ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.

ಬಿಬೇಕ್ ಡೆಬ್ರಾಯ್ ಅವರು ಭಾರತೀಯ ಅರ್ಥಶಾಸ್ತ್ರಜ್ಞ, ಲೇಖಕ ಮತ್ತು ವಿದ್ವಾಂಸರು, ಆರ್ಥಿಕ ನೀತಿ ಮತ್ತು ಸಂಸ್ಕೃತ ಪಠ್ಯಗಳಿಗೆ ನೀಡಿದ ಕೊಡುಗೆಗಳಿಗೆ ಖ್ಯಾತಿ ಪಡೆದವರಾಗಿದ್ದಾರೆ. ಭಾರತದ ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸ್ಥೂಲ ಅರ್ಥಶಾಸ್ತ್ರ, ಸಾರ್ವಜನಿಕ ಹಣಕಾಸು ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿರುವ ದೆಬ್ರಾಯ್ ಆರ್ಥಿಕ ಸುಧಾರಣೆಗಳು, ಆಡಳಿತ ಮತ್ತು ಭಾರತೀಯ ರೈಲ್ವೇಗಳಂತಹ ವಿಷಯಗಳ ಕುರಿತು ವರದಿ ಮಂಡಿಸಿದ್ದಾರೆ.

ಮಹಾಭಾರತ ಮತ್ತು ಭಗವದ್ಗೀತೆ ಸೇರಿದಂತೆ ಶಾಸ್ತ್ರೀಯ ಸಂಸ್ಕೃತ ಪಠ್ಯಗಳನ್ನು ಭಾಷಾಂತರಿಸಲು, ಪ್ರಾಚೀನ ಭಾರತೀಯ ಜ್ಞಾನಭಂಡಾರವನ್ನು ಆಧುನಿಕ ಓದುಗರಿಗೆ ತರುವಲ್ಲಿ ಅವರು ಮಾಡಿದ ಕೆಲಸಕ್ಕಾಗಿ ಅವರನ್ನು ಗೌರವಿಸಲಾಯಿತು.

ಪ್ರಧಾನಿ ಮೋದಿ ಸಂತಾಪ

ಇನ್ನು ಡಾ. ದೆಬ್ರಾಯ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದು, ಡಾ. ಬಿಬೇಕ್ ಡೆಬ್ರಾಯ್ ಜಿ ಅವರು ಒಬ್ಬ ಅತ್ಯುತ್ತಮ ವಿದ್ವಾಂಸರಾಗಿದ್ದರು, ಅರ್ಥಶಾಸ್ತ್ರ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆಧ್ಯಾತ್ಮಿಕತೆ ಮತ್ತು ಹೆಚ್ಚಿನವುಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಪರಿಣತರಾಗಿದ್ದರು. ಅವರ ಕೃತಿಗಳ ಮೂಲಕ, ಅವರು ಅಳಿಸಲಾಗದ ಗುರುತನ್ನು ಮುಂದಿನ ಪೀಳಿಗೆಗೆ ಬಿಟ್ಟು ನಿರ್ಗಮಿಸಿದ್ದಾರೆ. ಸಾರ್ವಜನಿಕ ನೀತಿಗೆ ಅವರ ಕೊಡುಗೆಗಳನ್ನು ಮೀರಿ, ಅವರು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಕೆಲಸ ಕೈಗೆತ್ತಿಕೊಂಡಿದ್ದರು. ಆಮೂಲಕ ಯುವಕರನ್ನು ಪ್ರಾಚೀನ ಗ್ರಂಥಗಳತ್ತ ಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ