ಪಣಜಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಗೋವಾ ಸೆಷನ್ಸ್ ಕೋರ್ಟ್, ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ನಿರ್ದೋಷಿ ಎಂದು ತೀರ್ಪು ನೀಡಿದೆ.
ತರುಣ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತೀರ್ಪನ್ನು ಇದೇ 21ರಂದು ಪ್ರಕಟಿಸುವುದಾಗಿ ಗೋವಾದ ಸೆಷನ್ಸ್ ನ್ಯಾಯಾಲಯವು ಕಳೆದ ಬುಧವಾರ ಹೇಳಿತ್ತು. ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶೆ ಕ್ಷಮಾ ಜೋಶಿ ಅವರು, ತಾಂತ್ರಿಕ ಕಾರಣಗಳಿಂದಾಗಿ ತೀರ್ಪನ್ನು ಮೇ 21ಕ್ಕೆ ಕಾಯ್ದಿರಿಸಿದ್ದರು.
ಸತತ ಮೂರನೇ ಬಾರಿ ನ್ಯಾಯಾಲಯವು ತೀರ್ಪನ್ನು ಮಂದೂಡಿತ್ತು. ‘ಟೌಕ್ಟೇ’ ಚಂಡಮಾರುತದಿಂದಾಗಿ ಗೋವಾದ ಹಲವೆಡೆ ಭಾನುವಾರದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.
2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ತೇಜ್ ಪಾಲ್ ಎದುರಿಸುತ್ತಿದ್ದಾರೆ. 2013ರ ನವೆಂಬರ್ 30ರಂದು ತೇಜ್ ಪಾಲ್ ರನ್ನು ಬಂಧಿಸಲಾಗಿತ್ತು. ಬಳಿಕ ತೇಜ್ ಪಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ವಿರುದ್ಧ ತೇಜ್ ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.