ನವದೆಹಲಿ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾರಥ್ಯದಲ್ಲಿ 2025ರ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ (Bihar elections) ಎನ್‌ಡಿಎ ಸ್ಪರ್ಧಿಸಲಿದೆ ಹಾಗೂ ಈ ನಿರ್ಧಾರವನ್ನು ಬಿಜೆಪಿಯ ಎರಡು ದಿನಗಳ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ತಿಳಿಸಿದ್ದಾರೆ.
ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆದಿದ್ದ ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ಕೋರ್ ಕಮಿಟಿ ಸರ್ವಾನುಮತದಿಂದ ಒಪ್ಪಿಕೊಂಡಿದೆ. ಬೇರೆ ಯಾವುದೇ ಸನ್ನಿವೇಶ ಉದ್ಭವಿಸುವ ಪ್ರಶ್ನೆಯೇ ಇಲ್ಲ,” ಎಂದ ಅವರು, ನಿತೀಶ್ ಕುಮಾರ್ ನಮ್ಮ ನಾಯಕ ಹಾಗೂ ಇದನ್ನು ಬಿಟ್ಟು ಬೇರೆ ಯಾವುದೇ ಬದಲಾವಣೆಯಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ದಿಲಿಪ್ ಜೈಸ್ವಾಲ್ ಅವರ ಘೋಷಣೆಯನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತು ಬಿಹಾರದ ಬಿಜೆಪಿ ಸಚಿವ ಪ್ರೇಮ್ ಕುಮಾರ್ ಬೆಂಬಲಿಸಿದ್ದಾರೆ. ”ನಿತೀಶ್ ಕುಮಾರ್ ನಮ್ಮ ನಾಯಕ ಮತ್ತು ನಮ್ಮ ನಾಯಕರಾಗಿ ಉಳಿಯುತ್ತಾರೆ. ಯಾವುದೇ ಗೊಂದಲವಿಲ್ಲ,” ಎಂದು ಗಿರಿರಾಜ್ ಸಿಂಗ್ ಹೇಳಿದ್ದರೆ, “ಅವರು (ನಿತೀಶ್ ಕುಮಾರ್) ಮುಖ್ಯಮಂತ್ರಿಯ ಅಭ್ಯರ್ಥಿಯಾಗಿದ್ದಾರೆ ಮತ್ತು ಉಳಿಯುತ್ತಾರೆ. ಎಲ್ಲಾ ಐದು ಮೈತ್ರಿ ಪಾಲುದಾರರು ಈ ಬಗ್ಗೆ ಒಮ್ಮತವನ್ನು ಹೊಂದಿದ್ದಾರೆ,” ಎಂದು ಬಿಹಾರ ಸಚಿವ ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಟ್ಟು 31 S ಸದಸ್ಯರ ಭಾಗವಹಿಸಿದ್ದರು. ಸಂಘಟನಾ ವಿಷಯಗಳು, ವಿಧಾನಸಭಾ ಚುನಾವಣೆಯ ಮಾರ್ಗಸೂಚಿ ಮತ್ತು ಜನವರಿ 15 ರಿಂದ ಪ್ರಾರಂಭವಾಗುವ ಎನ್‌ಡಿಎ ಕಾರ್ಯಕರ್ತರ ಜಂಟಿ ಸಭೆಯ ಬಗ್ಗೆಯೂ ಈ ವೇಳೆ ಚರ್ಚೆ ನಡೆಸಲಾಯಿತು.
“ಇದು ಐದು ಅಧಿವೇಶನಗಳಲ್ಲಿ ನಡೆದ ಪ್ರಮುಖ ಸಭೆಯಾಗಿದ್ದು, ಇದರಲ್ಲಿ ಬಿ ಎಲ್ ಸಂತೋಷ್, ವಿನೋದ್ ತಾವ್ಡೆ ಮತ್ತು ಇತರ ನಾಯಕರು ಭಾಗವಹಿಸಿದ್ದರು. ನಾವು ಜನವರಿ ಎರಡನೇ ವಾರದಲ್ಲಿ ರಾಜ್ಯ ಮಂಡಳಿ ಸಭೆ ಕರೆದಿದ್ದೇವೆ ಮತ್ತು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸಂಘಟನಾ ಕಾರ್ಯಗಳ ಬಗ್ಗೆ ಎಳೆ ಎಳೆಯಾಗಿ ಚರ್ಚಿಸಲಾಗಿದೆ. ಅಲ್ಲದೆ, ಎನ್‌ಡಿಎ ಕಾರ್ಯಕರ್ತರ ಸಭೆ ಮತ್ತು ಮಿತ್ರಪಕ್ಷಗಳೊಂದಿಗೆ ಉತ್ತಮ ಸಮನ್ವಯದ ಬಗ್ಗೆಯೂ ಚರ್ಚಿಸಲಾಗಿದೆ, ”ಎಂದು ಜೈಸ್ವಾಲ್ ಹೇಳಿದ್ದಾರೆ.
ಬಿಜೆಪಿ ವಕ್ತಾಋ ಎಂಎಲ್‌ಎ ಮನೋಜ್ ಶರ್ಮಾ ಹೇಳಿಕೆ
“ಅಭಿವೃದ್ದಿಯ ಬಗ್ಗೆ ನಾವು ಸಾಕಷ್ಟು ಮಾತನಾಡಬೇಕಾದ ಅಗತ್ಯವಿದೆ ಹಾಗೂ ಅಭಿವೃದ್ಧಿಯ ವಿಷಯದ ಮೇಲೆ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ,” ಎಂದು ಬಿಜೆಪಿ ವಕ್ತಾರ ಹಾಗೂ ಎಂಎಲ್‌ಎ ಮನೋಜ್ ಶರ್ಮಾ ತಿಳಿಸಿದ್ದಾರೆ. ಇದೇ ವೇಳೆ ಜೆಡಿಯು ರಾಜ್ಯ ಕಚೇರಿಯಿಂದ ಕರ್ಪೂರಿ ರಥ ಮತ್ತು ನಾರಿ ಶಕ್ತಿ ರಥವನ್ನು ರಾಜ್ಯದ ಪ್ರತಿ ಗ್ರಾಮಕ್ಕೂ ಕಳುಹಿಸಿ ನಿತೀಶ್ ಕುಮಾರ್ ಸರ್ಕಾರದ ಸಾಧನೆಗಳನ್ನು ಬಿತ್ತರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ.
ಈ ಸುದ್ದಿಯನ್ನು ಓದಿ: ಬಿಹಾರ ವಿಧಾನಸಭೆ ಚುನಾವಣೆ: ಮೂರು ಹಂತದಲ್ಲಿ ಮತದಾನ