ಪಾಟ್ನಾ: ಜೀವಿತ್ಪುತ್ರಿಕ ಹಬ್ಬ(Jivitputrika Festival)ದ ಸಂಭ್ರಮದಲ್ಲಿದ್ದ ಬಿಹಾರ(Bihar Tragedy)ದಲ್ಲಿ ಭೀಕರ ದುರಂತ ಸಂಭವಿಸಿದ್ದು, ಬರೋಬ್ಬರಿ 46 ಮಂದಿ ಬಲಿಯಾಗಿದ್ದಾರೆ. ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಕಳೆದ 24 ಗಂಟೆಗಳಲ್ಲಿ 37 ಮಕ್ಕಳು ಸೇರಿದಂತೆ ಒಟ್ಟು 46 ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ರಾಜ್ಯಾದ್ಯಂತ ನಿನ್ನೆಯಿಂದ ಜೀವಿತ್ಪುತ್ರಿಕ ಹಬ್ಬ ಆಚರಣೆ ಪ್ರಯುಕ್ತ ಜನರೆಲ್ಲರೂ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸುವ ಕ್ರಮ ಇದೆ. ಈ ಪುಣ್ಯಸ್ನಾನದ ವೇಳೆ ಭಾರೀ ದುರಂತ ನಡೆದಿವೆ. 15 ಜಿಲ್ಲೆಗಳಲ್ಲಿ ಜೀವಿತ್ಪುತ್ರಿಕ ಹಬ್ಬದ ಹಿನ್ನೆಲೆ ಪುಣ್ಯಸ್ನಾನದ ವೇಳೆ 37ಮಕ್ಕಳು, 7 ಮಹಿಳೆಯರು ಸೇರಿದಂತೆ ಸೇರಿದಂತೆ ಒಟ್ಟು 46 ಮಂದಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ವರದಿಯಾಗಿದೆ.
ಪೂರ್ವ ಮತ್ತು ಪಶ್ಚಿಮ ಚಂಪಾರಣ್, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‌ಪುರ, ಸಮಸ್ತಿಪುರ್, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಈ ದುರಂತ ಸಂಭವಿಸಿರುವ ಬಗ್ಗೆ ವರದಿಯಾಗಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಮುಂದಿನ ಸಂಬಂಧಿಕರಿಗೆ ತಲಾ ₹ 4 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್)ಯ ಹಲವು ತಂಡಗಳು ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಏನಿದು ಜೀವಿತ್ಪುತ್ರಿಕ ಹಬ್ಬ?
‘ಜಿತಿಯಾ’ ಅಥವಾ ಜೀವಿತ್ಪುತ್ರಿಕ ಹಬ್ಬ ಹಬ್ಬವನ್ನು ತಾಯಂದಿರು ತಮ್ಮ ಮಕ್ಕಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಆಚರಿಸುತ್ತಾರೆ. ಪೂಜೆಗೂ ಮುನ್ನ ಮಹಿಳೆಯರು ತಮ್ಮ ಮಕ್ಕಳೊಂದಿಗೆ ತಮ್ಮ ತಮ್ಮ ಊರಿನಲ್ಲಿರುವ ನದಿ, ಕೆರೆಗಳಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಹೀಗೆ ಪುಣ್ಯಸ್ನಾನ ಮಾಡುವಾಗ ಈ ಭೀಕರ ದುರಂತ ಸಂಭವಿಸಿದೆ ಎನ್ನಲಾಗಿದೆ.
ಮಾಧ್ಯಮದ ಜತೆ ಮಾತನಾಡಿದ ಔರಂಗಾಬಾದ್ ಜಿಲ್ಲಾಧಿಕಾರಿ ಶ್ರೀಕಾಂತ್ ಶಾಸ್ತ್ರಿ, ‘ಜೀವಿತಪುತ್ರಿಕಾ’ ಹಬ್ಬದ ನಿಮಿತ್ತ ಜನ ತಮ್ಮ ಕುಟುಂಬ ಸದಸ್ಯರೊಂದಿಗೆ ಕೆರೆಗಳಲ್ಲಿ ಪುಣ್ಯಸ್ನಾನ ಮಾಡಿ, ಮಹಿಳೆಯರು ಕ್ಷೇಮಕ್ಕಾಗಿ ಉಪವಾಸ ವ್ರತಾಚರಣೆ ಕೈಗೊಳ್ಳುತ್ತಾರೆ. ಇದೇ ರೀತಿ ಪುನ್ಯ ಸ್ನಾನದ ವೇಳೆ ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿದ್ಧಾರೆ ಎಂದು ಹೇಳಿದ್ದಾರೆ.
ವಾರದ ಹಿಂದೆ ಇಂತಹದ್ದೇ ಒಂದು ತುಮಕೂರಿನ ತುರುವೆಕೆಯಲ್ಲಿ ನಡೆದಿತ್ತು. ಗಣೇಶ ಮೂರ್ತಿ ವಿಸರ್ಜನೆಗೆಂದು ಕೆರೆಗೆ ಹೋಗಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲಾಗಿರುವ ಘಟನೆ ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ. ರೇವಣ್ಣ(46), ಶರತ್ ಹಾಗೂ ದಯಾನಂದ ಮೃತರು. ದಂಡಿನ ಶಿವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದರು.
ಈ ಸುದ್ದಿಯನ್ನೂ ಓದಿ: Children Drowned: ಪುಣ್ಯಸ್ನಾನಕ್ಕೆ ತೆರಳಿದ್ದ ಎಂಟು ಮಕ್ಕಳು ಕೊಳದಲ್ಲಿ ಮುಳುಗಿ ದಾರುಣ ಸಾವು