Saturday, 14th December 2024

ರ‍್ಯಾಲಿಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ಟ್ರಕ್‌ಗೆ ಡಿಕ್ಕಿ: ಮೂವರ ಸಾವು

ಬಿಲಾಸ್‌ಪುರ: ರಾಯ್‌ಪುರದಲ್ಲಿ ಪ್ರಧಾನಿ ಮೋದಿಯ ಸಾರ್ವಜನಿಕ ರ‍್ಯಾಲಿಗೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಸುಮಾರು 40 ಜನರಿದ್ದ ಬಸ್ ಅಂಬಿಕಾಪುರದಿಂದ ರಾಯಪುರಕ್ಕೆ ತೆರಳುತ್ತಿದ್ದಾಗ ಬೆಲ್ಟಾರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ನಿಂತಿದ್ದ ಟ್ರಕ್ ಬಸ್ ಚಾಲಕನಿಗೆ ಸ್ಪಷ್ಟವಾಗಿ ಕಾಣದ ಕಾರಣ ಬಸ್ ಟ್ರಕ್‌ಗೆ ಹಿಂಬದಿ ಯಿಂದ ಡಿಕ್ಕಿ ಹೊಡೆದಿದೆ.

ಮೃತರನ್ನು ಸೂರಜ್‌ಪುರ ಜಿಲ್ಲೆಯ ನಿವಾಸಿಗಳಾದ ಸಜನ್ (30), ರುಕ್‌ದೇವ್ (45), ಮತ್ತು ಬಸ್ ಚಾಲಕ ಅಕ್ರಂ ರಾಜಾ (28) ಎಂದು ಗುರುತಿಸಲಾಗಿದೆ. ಗಾಯಗೊಂಡವ ರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಿಲಾಸ್‌ಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಪ್ರತಿ ಸಂತ್ರಸ್ತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.