Monday, 28th October 2024

Bishnoi Gang: ಸಲ್ಮಾನ್‌ನಿಂದ ದೂರ ಇರಿ…ನಿಮ್ಮ ಮೇಲೂ ನಮ್ಮ ನಿಗಾ ಇದೆ; ಸಂಸದ ಪಪ್ಪು ಯಾದವ್‌ಗೂ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ

bishnoi gang

ಪಟನಾ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ(Baba Siddiqui) ಹತ್ಯೆ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌(Bishnoi Gang)ನಿಂದ ಇದೀಗ ಸಂಸದರೊಬ್ಬರಿಗೆ ಜೀವ ಬೆದರಿಕೆ ಬಂದಿದೆ. ಬಿಹಾರದ ಪುರ್ನಿಯಾದ ಸ್ವತಂತ್ರ ಸಂಸದ ಪಪ್ಪು ಯಾದವ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್(Lawrence Bishnoi) ಗ್ಯಾಂಗ್‌ನೊಂದಿಗೆ ಸಂಬಂಧವಿದೆ ಎಂದು ಹೇಳಲಾದ ಕೊಲೆ ಬೆದರಿಕೆ ಇದೆ ಎಂದು ವರದಿಯಾಗಿದೆ. ಕರೆ ಮಾಡಿದವರು ಯಾದವ್ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ನಟ ಸಲ್ಮಾನ್ ಖಾನ್‌ನಿಂದ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಬರ್ಬರವಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರ

ಜೈಲಿನ ಸಿಗ್ನಲ್ ಜಾಮರ್‌ಗಳನ್ನು ನಿಷ್ಕ್ರಿಯಗೊಳಿಸಲು ಲಾರೆನ್ಸ್ ಬಿಷ್ಣೋಯ್ ಗಂಟೆಗೆ 1 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ನಂತರ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಪಪ್ಪು ಯಾದವ್‌, ತಮಗೆ ಅನುಮತಿ ಕೊಟ್ಟರೆ ಕೇವಲ 24ಗಂಟೆಗಳಲ್ಲಿ ಕೆಡವುದಾಗಿ ಘೋಷಿಸಿದ್ದಾರೆ.

ಬಾಬಾ ಸಿದ್ದಿಕ್ ಅವರ ಹತ್ಯೆಯನ್ನು ಖಂಡಿಸಿದ ಯಾದವ್, ಇದನ್ನು ಅವಮಾನಕಾರಿ ಘಟನೆ ಎಂದು ಹೇಳಿದ್ದರು. ಸರ್ಕಾರದ ಬೆಂಬಲಿತ ಮಾಜಿ ಸಚಿವರ ಹತ್ಯೆಯು ಮಹಾರಾಷ್ಟ್ರದಲ್ಲಿ “ಸಂಪೂರ್ಣ ಕಾನೂನುಬಾಹಿರತೆಯನ್ನು” ಎತ್ತಿ ತೋರಿಸುತ್ತದೆ. ಬಿಹಾರದ ಮಗ ಬಾಬಾ ಸಿದ್ದಿಕ್ ಹತ್ಯೆ ಅತ್ಯಂತ ದುರಂತವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಪ್ರಭಾವಿ ನಾಯಕರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರಿಗೆ ಏನು ರಕ್ಷಣೆ ಕೊಡಲು ಸಾಧ್ಯ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರು ಲಾರೆನ್ಸ್ ಬಿಷ್ಣೋಯ್ ಅವರ ಬಗ್ಗೆ ಕೇಳಿದಾಗ ಯಾದವ್ ಹತಾಶೆಗೊಂಡರು, “ಇಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಬೇಡಿ ಎಂದು ನಾನು ಈಗಾಗಲೇ ನಿಮಗೆ ಹೇಳಿದ್ದೇನೆ” ಎಂದು ಅವರಿಗೆ ನೆನಪಿಸಿದರು. ಮಾತಿನ ಚಕಮಕಿಯಲ್ಲಿ ಅವರು ಕೋಪ ಕಳೆದುಕೊಂಡಿರುವ ವಿಡಿಯೋವೊಂದು ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ: Lawrence Bishnoi: ಲಾರೆನ್ಸ್‌ ಬಿಷ್ಣೋಯ್‌ ಎನ್‌ಕೌಂಟರ್‌ ಮಾಡುವ ಪೊಲೀಸರಿಗೆ 1,11,11,111ರೂ. ಬಹುಮಾನ; ಕರಣಿ ಸೇನೆ ಅನೌನ್ಸ್‌

66 ವರ್ಷದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಅಕ್ಟೋಬರ್‌ 12ರಂದು ಮೂವರು ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿನ ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗೆ ಈ ದಾಳಿ ನಡೆದಿತ್ತು. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ವೇಳೆ, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದೇ ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟರು.

ಕೊಲೆ ತನಿಖೆಗೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಮಹಾರಾಷ್ಟ್ರದಾದ್ಯಂತ 15 ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಶೂಟರ್‌ಗಳಿಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಮುಂಬೈಯ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದೆ. ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಿದ್ದಿಕಿ ಮಾತ್ರವಲ್ಲ ಅವರ ಪುತ್ರ ಝೀಶಾನ್ ಸಿದ್ದಿಕಿ ಕೂಡ ಗ್ಯಾಂಗ್‌ಸ್ಟರ್‌ನ ಹಿಟ್‌ಲಿಸ್ಟ್‌ನಲ್ಲಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಅಪ್ಪ-ಮಗ ಇಬ್ಬರನ್ನೂ ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.