Friday, 22nd November 2024

ವಿಧಾನಪರಿಷತ್ ಚುನಾವಣೆ: ವಾರಣಾಸಿಯಲ್ಲಿ ಮುಖಭಂಗ

ಲಕ್ನೋ: ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿಯೂ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದರೂ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿಯಲ್ಲಿ ಮುಖಭಂಗ ಅನುಭವಿಸಿದೆ.

ಉತ್ತರಪ್ರದೇಶದ ವಿಧಾನಪರಿಷತ್ 100 ಸ್ಥಾನಗಳ ಸಂಖ್ಯಾಬಲ ಹೊಂದಿದ್ದು, 36 ಸ್ಥಾನಗಳಿಗೆ ಮತದಾನ ನಡೆದಿತ್ತು. ಒಂಬತ್ತು ಮಂದಿ ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪೂರ್ಣಪ್ರಮಾಣದ ಫಲಿತಾಂಶ ಘೋಷಣೆಯಾದರೆ, ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ. ಕಳೆದ ಒಂದು ದಶಕದ ನಂತರ ಇದೇ ಮೊದಲ ಬಾರಿಗೆ ಮೇಲ್ಮನೆಯಲ್ಲಿ ಬಹುಮತ ಪಡೆದಂತಾಗಲಿದೆ.

ವಾರಣಾಸಿ ಕ್ಷೇತ್ರದಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿ ಬ್ರಿಜೇಶ್ ಸಿಂಗ್ ಪತ್ನಿ ಅನ್ನಪೂರ್ಣ ಸಿಂಗ್ ಭರ್ಜರಿ ಮತಗಳಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿ ದ್ದಾರೆ. 2016ರಲ್ಲಿ ನಡೆದ ಮೇಲ್ಮನೆ ಚುನಾವಣೆಯಲ್ಲಿ ಬ್ರಿಜೇಶ್ ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಈ ಸಂದರ್ಭ ದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲವಾಗಿತ್ತು.

ವಿರೋಧಪಕ್ಷವಾದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ವಿಧಾನಪರಿಷತ್ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿಯೂ ಗೆಲುವು ಪಡೆಯಲಿಲ್ಲ.

ಮೇಲ್ಮನೆ ಚುನಾವಣೆಯಲ್ಲಿ ಸಂಸದರು, ಶಾಸಕರು, ಕಾರ್ಪೋರೇಟರ್ಸ್ ಗಳು ಮತ್ತು ಗ್ರಾಮ ಪಂಚಾಯ್ತಿ ಮಟ್ಟದ ಜನಪ್ರತಿನಿಧಿಗಳು ತಮ್ಮ ಮತ ಚಲಾಯಿಸುವ ಮೂಲಕ ವಿಧಾನಪರಿಷತ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.