Sunday, 15th December 2024

ಕಳ್ಳಭಟ್ಟಿ ದುರಂತ ಪ್ರಕರಣ: ಬಿಜೆಪಿ ಶಾಸಕ ವಜಾ

ಅಲಿಗಡ: ಉತ್ತರಪ್ರದೇಶ ರಾಜ್ಯದ ಅಲಿಗಡ ಜಿಲ್ಲೆಯಲ್ಲಿ ನಡೆದ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಜೆಪಿಯ ಶಾಸಕ ರಿಷಿ ಶರ್ಮಾರನ್ನು ಸೋಮವಾರ ಬಿಜೆಪಿ ಪಕ್ಷದಿಂದ ವಜಾ ಮಾಡಿದೆ.

ಶರ್ಮಾ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಿಷಿಪಾಲ್ ಪಾಲ್‌ ಸಿಂಗ್ ತಿಳಿಸಿದ್ದಾರೆ. ಆರೋಪಿ ರಿಷಿ ಶರ್ಮಾ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಇತರ ಐವರು ಮುಖ್ಯ ಆರೋಪಿ ಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೈಥಾನಿ ತಿಳಿಸಿದ್ದಾರೆ.

ಮೇ 27ರ ರಾತ್ರಿ ಕಳ್ಳಭಟ್ಟಿ ಸೇವಿಸಿ 35 ಮಂದಿ ಮೃತಪಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿ ರಿಷಿ ಶರ್ಮಾ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ನಾಪತ್ತೆಯಾಗಿದ್ದರು.

ಆದರೆ, ಶರ್ಮಾ ಅವರನ್ನು ಪತ್ತೆ ಹಚ್ಚುವಲ್ಲಿ ಉತ್ತರ ಪ್ರದೇಶ ಪೊಲೀಸರು ಸಫಲರಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಅಲಿಗಡ-ಬುಲಂದ್‌ಶಹರ್ ಗಡಿ ಪ್ರದೇಶದಲ್ಲಿ ಶರ್ಮಾ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.