Saturday, 5th October 2024

’ಕೋವಿಡ್ ಸಂತ್ರಸ್ಥ’ರಿಗಾಗಿ ಸಹಾಯವಾಣಿಗೆ ಚಾಲನೆ ನೀಡಿದ ನಡ್ಡಾ

ನವದೆಹಲಿ: ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ದೇಶಾದ್ಯಂತ #BJYMDoctorHelpline ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಬುಧವಾರ ಚಾಲನೆ ನೀಡಿದರು.

ಕರೋನ ಸೋಂಕಿನ ಲಕ್ಷಣಗಳಿದ್ದಲ್ಲಿ ಅಥವಾ ಇಲ್ಲದ್ದಿದಲ್ಲಿ, ನಿಮ್ಮ ಕೋವಿಡ್ ರಿಪೋರ್ಟ್ ಪಾಸಿಟಿವ್ ಆಗಿದ್ದಲ್ಲಿ ನಿಮಗೆ ಸರಿಯಾದ ಮಾಹಿತಿ, ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲು ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಟೆಲಿ ಕನ್ಸಲ್ಟೇಶನ್ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಇದರಲ್ಲಿ 500ಕ್ಕೂ ಅಧಿಕ ವೈದ್ಯರು ದೇಶಾದ್ಯಂತ ಟೆಲಿ ಸಮಾಲೋಚನೆ ಮೂಲಕ ರೋಗಿಗಳ ಸಹಾಯಕ್ಕೆ ಸಹಕರಿಸಲಿದ್ದಾರೆ.

ಸಹಾಯವಾಣಿ 080 6817 3286 ಸಂಖ್ಯೆಗೆ ಕರೆ ಮಾಡಿ ತಮಗೆ ಬೇಕಾದ ಭಾಷೆಯನ್ನು ಆಯ್ದುಕೊಂಡ ನಂತರ ಕೆಲವೇ ನಿಮಿಷ ಗಳಲ್ಲಿ, ತಜ್ಞ ವೈದ್ಯರು, ಸೋಂಕಿತರ ಮೊಬೈಲ್ ಗೆ ಕರೆ ಮಾಡಿ ಕೋವಿಡ್ ನ ಲಕ್ಷಣಗಳು, ಆಮ್ಲಜನಕದ ಸ್ಯಾಚುರೇಶನ್ ಪ್ರಮಾಣ ಮತ್ತು ಇತರ ಅಗತ್ಯ ವಿವರಗಳನ್ನು ಪಡೆದು ಸೂಕ್ತವಾದ ಸಲಹೆ ನೀಡಲಿದ್ದಾರೆ.

ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಸಹಾಯವಾಣಿ ಚಾಲನೆ ನೀಡುವ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.  “ದೇಶದ ಯಾವುದೇ ಮೂಲೆಯಿಂದ ನಾಗರಿಕರು ಕರೆ ಮಾಡಿದ ನಂತರ ಐ.ವಿ.ಆರ್ ಮೂಲಕ ತಮ್ಮ ಆದ್ಯತೆಗಳನ್ನು ನಮೂದಿಸಿದ ತಕ್ಷಣ, ವೈದ್ಯರೊಬ್ಬರಿಂದ ಕರೆ ಮಾಡಲಾಗುತ್ತದೆ. ನಂತರ ಕರೆ ಮಾಡಿದ ವ್ಯಕ್ತಿಯು ಆಯಾ ರಾಜ್ಯದ ನಿರ್ಧಿಷ್ಟ ಯುವ ಮೋರ್ಚಾ ಘಟಕ/ ಕಾರ್ಯಕರ್ತರ ಮೂಲಕ ಔಷಧಿಗಳು, ಅಗತ್ಯ ದಿನಬಳಕೆ ವಸ್ತುಗಳ ಪೂರೈಕೆ,ಆಹಾರ ಹಾಗೂ ಇತರ ಸಹಾಯಗಳಿಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದರು.

ನಂತರ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ, ದೇಶದ ನಾಗರಿಕರ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಒದಗಿಸುತ್ತಿರುವ ಬಿಜೆಪಿ ಕಾರ್ಯಕರ್ತರೆಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ, “ದೇಶಾದ್ಯಂತ ಇಂದು ಆಸ್ಪತ್ರೆ ಸೇರುತ್ತಿ ರುವ ಶೇ.95-98 ರಷ್ಟು ಸೋಂಕಿತರೆಲ್ಲರಿಗೂ ಅಗತ್ಯ ಮಾಹಿತಿ, ಡಾಕ್ಟರ್ ರೊಂದಿಗಿನ ಸಮಾಲೋಚನೆ ಕೊರತೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಹೋಮ್ ಕ್ವಾರಂಟೈನ್, ಕೋವಿಡ್-19 ಗುಣಲಕ್ಷಣಗಳು, ಆಸ್ಪತ್ರೆ ನೋಂದಣಿ ಕುರಿತಂತೆ ಹಲವು ಸೇವೆಗಳನ್ನು ಸಹಾಯವಾಣಿ ಮೂಲಕ ವೈದ್ಯರೊಂದಿಗಿನ ಸಮಾಲೋಚನೆ/ ನೆರವಿನಿಂದ ಪಡೆಯಬಹುದು” ಎಂದು ಹೇಳಿದ್ದಾರೆ.