ನವದೆಹಲಿ: ಎಎಪಿ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಮಹಿಳಾ ಮೋರ್ಚಾದ ಅಧ್ಯಕ್ಷೆ ರಿಚಾ ಪಾಂಡೆ ಮಿಶ್ರಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಳೆಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿದರು.
ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಘಟನೆಯ ಬಗ್ಗೆ ಕೇಜ್ರಿವಾಲ್ ಮೌನವಾಗಿರುವುದಕ್ಕೆ ಬಿಜೆಪಿ ಮಹಿಳಾ ಅವರಿಗೆ ಬಳೆಗಳನ್ನು ಹಸ್ತಾಂತರಿಸಲು ಬಯಸಿದೆ ಎಂದು ಮಿಶ್ರಾ ಹೇಳಿದರು.
ಇದಕ್ಕೂ ಮುನ್ನ, ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಎಸ್.ಕುಶ್ವಾಹಾ ನೇತೃತ್ವದ ದೆಹಲಿ ಪೊಲೀಸರ ತಂಡವು ಗುರುವಾರ ಮಾಲಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರಿಂದ ನಾಲ್ಕು ತಾಸು ಮಾಹಿತಿ ಕಲೆ ಹಾಕಿತು. ಮಾಲಿವಾಲ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ಎಫ್‌ಐಆರ್ ದಾಖಲಿಸಿದೆ.
ಪ್ರಕರಣದ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಬಿಭವ್ ಕುಮಾರ್‌ಗೆ ಶುಕ್ರವಾರ ಸಮನ್ಸ್ ನೀಡಿದೆ.
‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದಾಗ, ಅವರ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ತಮ್ಮ ಜೊತೆಗೆ ಅನುಚಿತ ವಾಗಿ ವರ್ತಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದರು’ ಎಂದು ಸಂಸದೆ ಸ್ವಾತಿ ಮಾಲಿವಾಲ್ ಆರೋಪಿಸಿದ್ದರು.