Friday, 22nd November 2024

ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ವಿಭಾಗದಲ್ಲಿ ಸ್ಫೋಟ, ಇಬ್ಬರಿಗೆ ಗಾಯ

ಶ್ರೀನಗರ: ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ವಾಯುನೆಲೆ ಸ್ಟೇಷನ್​​ ಒಳಗೆ, 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ.

ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು, ಪ್ರಾಣ ಹಾನಿಯಾಗಿಲ್ಲ, ಮೊದಲ ಸ್ಫೋಟ ಕಟ್ಟಡ ಚಾವಣಿಯನ್ನು ಸೀಳಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ವಿಮಾನ ನಿಲ್ದಾಣ ಏರ್ ಫೋರ್ಸ್ ಏರಿಯಾದಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಬಾಂಬ್ ನಿಷ್ಕ್ರಿಯದಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದೆ.

ಜಮ್ಮು ವಿಮಾನ ನಿಲ್ದಾಣದ ರನ್ ವೇ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ವಾಯುಪಡೆಯ ಹಿಡಿತದಲ್ಲಿದೆ. ಜಮ್ಮುವಿಗೆ ಬರುವ ಪ್ರಯಾಣಿಕ ವಿಮಾಣಗಳು ಸಹ ಇದೇ ಪ್ರದೇಶದಿಂದ ಹಾರಾಟ ನಡೆಸುತ್ತವೆ. ಕೆಲವೇ ಕ್ಷಣದಲ್ಲಿ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದಾರೆ.

ಜಮ್ಮು-ಕಾಶ್ಮೀರದ ಭದ್ರತೆಗೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್​ ಷಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಹಲ ಗಣ್ಯರು ಸಭೆ ನಡೆಸಿದ್ದರು. ಮುಂದಿನ ವರ್ಷ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡುತ್ತಿದೆ.