ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಆರು ದಿನಗಳಲ್ಲಿ 70 ಬಾಂಬ್ ಬೆದರಿಕೆ(Bomb Threat) ಬಂದಿದ್ದು, ವಿಮಾನಯಾನ ಸುರಕ್ಷತಾ ಸಂಸ್ಥೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಅಧಿಕಾರಿಗಳು ಶನಿವಾರ ನವದೆಹಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪ್ರಯಾಣಿಕರಿಗೆ ತೊಂದರೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಭಾರೀ ನಷ್ಟವನ್ನುಂಟು ಮಾಡುವ ಬೆದರಿಕೆಗಳನ್ನು ನಿಭಾಯಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ವಿಧಾನವನ್ನು (ಎಸ್‌ಒಪಿ) ಅನುಸರಿಸುವಂತೆ ಸಿಇಒಗಳಿಗೆ ಮನವಿ ಮಾಡಲಾಯಿತು.
ಶನಿವಾರ ಒಂದೇ ದಿನ ವಿವಿಧ ವಿಮಾನಯಾನ ಸಂಸ್ಥೆಗಳು ನಡೆಸುತ್ತಿದ್ದ ವಿಮಾನಗಳಿಗೆ 30ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ಬಂದಿವೆ. ಇದುವರೆಗಿನ ತನಿಖೆಯಲ್ಲಿ, ಈ ವಾರ ಕೆಲವು ಬೆದರಿಕೆಗಳನ್ನು ಹೊರಡಿಸಿದ ಐಪಿ (ಇಂಟರ್ನೆಟ್ ಪ್ರೋಟೋಕಾಲ್) ವಿಳಾಸಗಳು ಲಂಡನ್, ಜರ್ಮನಿ, ಕೆನಡಾ ಮತ್ತು ಯುಎಸ್‌ನಿಂದ ಬಂದವು ಎಂಬುದು ತನಿಖೆ ವೇಳೆ ಬಯಲಾಗಿದೆ.
ವಿಮಾನಗಳನ್ನೇ ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕುವ ಪ್ರವೃತ್ತಿ ಮತ್ತೆ ಹೆಚ್ಚಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ವಿಸ್ತಾರ ವಿಮಾನ (Vistara flight)ಕ್ಕೆ ಬಂದ ಬಾಂಬ್ ಬೆದರಿಕೆ. ದಿಲ್ಲಿಯಿಂದ ಲಂಡನ್‌ಗೆ ತೆರಳುತ್ತಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಜರ್ಮನಿಯ ಫ್ರಾಂಕ್‌ಫರ್ಟ್ ಇಳಿಸಲಾಯಿತು. ʼʼಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಮತ್ತು ತಪಾಸಣೆ ನಡೆಸಲಾಗಿದೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲʼʼ ಎಂದು ವಿಸ್ತಾರ ವಿಮಾನದ ಮೂಲಗಳು ತಿಳಿಸಿವೆ. ಕೂಲಂಕುಷ ಪರಿಶೀಲನೆ ಬಳಿಕ ವಿಮಾನ ಲಂಡನ್‌ಗೆ ತೆರಳಿದೆ.
ʼʼಶುಕ್ರವಾರ (ಅಕ್ಟೋಬರ್ 18) ರಾತ್ರಿ ದಿಲ್ಲಿಯಿಂದ ಲಂಡನ್‌ಗೆ ಹೊರಟಿದ್ದ ವಿಮಾನಕ್ಕೆ ಬೆದರಿಕೆ ಬಂದ ಹಿನ್ನಲೆಯಲ್ಲಿ ತಡರಾತ್ರಿ 12.30ರ ಸುಮಾರಿಗೆ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಪ್ರಯಾಣಿಕರನ್ನೆಲ್ಲ ಇಳಿಸಿ ತಪಾಸಣೆ ನಡೆಸಲಾಯಿತು. ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಲಂಡನ್‌ಗೆ ಪ್ರಯಾಣ ಬೆಳೆಸಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕಾಸ ಏರ್‌ಗೂ ಬೆದರಿಕೆ
ಈತನ್ಮಧ್ಯೆ ಬೆಂಗಳೂರಿನಿಂದ ಮುಂಬೈಗೆ ಶುಕ್ರವಾರ ತೆರಳಬೇಕಿದ್ದ ಆಕಾಸ ಏರ್‌ನ ಕ್ಯೂಪಿ 1366 (QP 1366) ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿತ್ತು. ನಿರ್ಗಮಿಸುವ ಸ್ವಲ್ಪ ಸಮಯದ ಈ ಬೆದರಿಕೆ ಸಂದೇಶ ಬಂದಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. “ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ತಪಾಸಣೆ ನಡೆಸಲಾಯಿತು” ಎಂದು ಅಕಾಸ ಏರ್ ಎಕ್ಸ್‌ನಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Bomb threat: ಹುಸಿಬಾಂಬ್ ಬೆದರಿಕೆ; ವಿಮಾನಯಾನ ಸಂಸ್ಥೆಗಳಿಗಾಗುತ್ತಿರುವ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್