ನವದೆಹಲಿ: ಮುಂಬರುವ ನವೆಂಬರ್ 17ರಂದು ಐದು ರಾಷ್ಟ್ರಗಳ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸ ಲಾಗುವುದು ಎಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ರಾಷ್ಟ್ರ ರಷ್ಯಾ ಘೋಷಿಸಿದೆ.
ಬ್ರಿಕ್ಸ್ ಎಂದರೆ ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ ಮುಂತಾದ ಸದಸ್ಯ ರಾಷ್ಟç ಗಳನ್ನೊಳಗೊಂಡ ಒಂದು ಸಮೂಹ. 3.6 ಶತಕೋಟಿಗೂ ಹೆಚ್ಚು ಜನರನ್ನು ಪ್ರತಿನಿಧಿಸುವ ಪ್ರಭಾವಿ ಬಣ ಎಂದು ಕರೆಯಲಾಗುತ್ತದೆ.
ಎಲ್‌ಎಸಿಯ ಉದ್ದಕ್ಕೂ ಭಾರತೀಯ ಮತ್ತು ಚೀನಾದ ಯೋಧರ ನಡುವಿನ ಸಂಘರ್ಷ ನಡುವೆ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬ್ರಿಕ್ಸ್‌ನಲ್ಲಿ ಮುಖಾಮುಖಿಯಾಗುವ ನಿರೀಕ್ಷೆಯಿದೆ.
ಬ್ರಿಕ್ಸ್ ರಾಷ್ಟ್ರಗಳ ನಾಯಕರ ಸಭೆಯ ವಿಷಯವೆಂದರೆ ‘ಜಾಗತಿಕ ಸ್ಥಿರತೆ, ಭದ್ರತೆ ಮತ್ತು ನವೀನ ಬೆಳವಣಿಗೆಗೆ ಬ್ರಿಕ್ಸ್ ಪಾಲುದಾರಿಕೆ’ ಎಂದು ರಷ್ಯಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಇಬ್ಬರೂ ಕಳೆದ ಕೆಲವು ವರ್ಷಗಳಿಂದ ಬ್ರಿಕ್ಸ್‌ನ ಎಲ್ಲಾ ಶೃಂಗಸಭೆ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಮೇ ತಿಂಗಳ ಆರಂಭದಿಂದ ಪೂರ್ವ ಲಡಾಕ್ ಗಡಿರೇಖೆಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ಸಂಘರ್ಷ ನಡೆದಿದ್ದು ಅಂದಿನಿಂದ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಬಿಗಡಾಯಿಸುವಂತೆ ಮಾಡಿದೆ.