Sunday, 5th January 2025

Budget 2025: 8ನೇ ಬಾರಿಗೆ ಬಜೆಟ್‌ ಮಂಡಿಸಲು ನಿರ್ಮಲಾ ಸೀತಾರಾಮನ್‌ ಸಜ್ಜು; ಈ ಬಾರಿಯ ಪ್ರಮುಖ ಅಂಶಗಳೇನು?

Budget 2025

ನವದೆಹಲಿ: 2025ರ ಕೇಂದ್ರ ಬಜೆಟ್‌ (Budget 2025) ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitaraman) ಅವರು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಅವರ ಸತತ 8ನೇ ಬಜೆಟ್ ಮತ್ತು ಮೋದಿ ಸರ್ಕಾರದ (Central Government) ಮೂರನೇ ಅವಧಿಯ 2ನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್‌ ದೀರ್ಘಾವಧಿಯ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದು ಹೇಳಲಾಗಿದೆ.

ಬಜೆಟ್‌ನ ಪ್ರಮುಖ ಅಂಶಗಳು

ಆದಾಯ ತೆರಿಗೆ ವಿನಾಯಿತಿ: ವಾರ್ಷಿಕವಾಗಿ 15 ಲಕ್ಷ ರೂ.ವರೆಗೆ ಗಳಿಸುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಕ್ರಮವು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇಂಧನದ ಮೇಲಿನ ಅಬಕಾರಿ ಸುಂಕ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಹೆಚ್ಚಿನ ಅಬಕಾರಿ ಸುಂಕದಿಂದಾಗಿ ಇಂಧನ ಬೆಲೆ ಕಡಿಮೆಯಾಗಿಲ್ಲ. ಈ ಸುಂಕಗಳನ್ನು ಕಡಿಮೆ ಮಾಡುವುದರಿಂದ ಹಣದುಬ್ಬರದ ಒತ್ತಡವನ್ನು ನಿವಾರಿಸಬಹುದು. ಇದರಿಂದ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಬಹುದು ಎನ್ನಲಾಗಿದ್ದು, ಹೀಗಾಗಿ ಈ ಬಜೆಟ್‌ನಲ್ಲಿ ಅಬಕಾರಿ ಸುಂಕ ಇಳಿಕೆ ನಿರೀಕ್ಷಿಸಬಹುದು.

ಉದ್ಯೋಗ-ತೀವ್ರ ವಲಯಗಳಿಗೆ ಬೆಂಬಲ: ಈ ಬಾರಿಯ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗುವಂತಹ ಕೆಲ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಗಾರ್ಮೆಂಟ್ಸ್, ಪಾದರಕ್ಷೆಗಳು, ಪ್ರವಾಸೋದ್ಯಮ ಮತ್ತು MSMEಗಳಂತಹ ಉದ್ಯೋಗ-ಭಾರೀ ಕೈಗಾರಿಕೆಗಳ ಮೇಲೆ ಬಜೆಟ್‌ ಗಮನ ಕೇಂದ್ರೀಕರಿಸಬಹುದು. ಈ ವಲಯಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸಬಹುದು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವನ್ನು ಪ್ರಬಲಗೊಳಿಸಲು ಸಹಕಾರಿಯಾಗಲಿದೆ.

ಆರೋಗ್ಯ ಮತ್ತು ಶಿಕ್ಷಣ: ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕೇತ್ರಕ್ಕೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆಗಳಿವೆ. ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಯೋಜನೆಯನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ದೇಶದ ಹಲವು ಕಡೆ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಯೋಜನೆಯನ್ನು ಕೇಂದ್ರ ಹಾಕಿಕೊಂಡಿದೆ ಎಂದು ಹೇಳಲಾಗಿದೆ.

ಸ್ಟಾರ್ಟ್‌ ಅಪ್‌ಗಳು ಮತ್ತು ಎಂಎಸ್‌ಎಂಇಗಳಲ್ಲಿ ಸುಧಾರಣೆ: ಜಾಗತಿಕ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯ ಭಾರತೀಯ ಕೈಗಾರಿಕೆಗಳಿಗೆ ಹಾನಿ ಮಾಡಿದೆ. ದೇಶೀಯ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಉತ್ತೇಜನ ದೊರಕಬಹುದು. ಆಮದನ್ನು ಕಡೆಮೆ ಮಾಡಿ ರಫ್ತು ಹೆಚ್ಚು ಮಾಡಲು ಕೆಲ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ : Forbes Most Powerful Women: ಪ್ರಬಲ ಮಹಿಳೆಯರ ಪಟ್ಟಿ ಪ್ರಕಟ; ನಿರ್ಮಲಾ ಸೀತಾರಾಮನ್ ಸೇರಿ ಭಾರತದ ಮೂವರು ನಾರಿ ಮಣಿಯರಿಗೆ ಸ್ಥಾನ