Saturday, 14th December 2024

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ, ಜಲೌನ್ ಜಿಲ್ಲೆಯ ಒರೈ ತೆಹಸಿಲ್‌ನ ಕೈಥೇರಿ ಗ್ರಾಮದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದರು.

ಎಕ್ಸ್‌ಪ್ರೆಸ್‌ವೇ ಕಾಮಗಾರಿ ಯನ್ನು 28 ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ.

ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 296 ಕಿಮೀ ಉದ್ದದ ನಾಲ್ಕು ಪಥದ ಎಕ್ಸ್‌ಪ್ರೆಸ್‌ವೇ ಆಗಿದೆ. ಫೆಬ್ರವರಿ 29, 2020 ರಂದು ಪ್ರಧಾನಿ ಮೋದಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.

296 ಕಿಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಏಳು ಜಿಲ್ಲೆಗಳ ಮೂಲಕ ಹಾದು ಹೋಗುವುದರಿಂದ ಏಳು ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ. ಇದು ಚಿತ್ರಕೂಟ್ ಜಿಲ್ಲೆಯ ಭರತ್‌ಕಪ್ ಬಳಿಯ ಗೊಂಡಾ ಹಳ್ಳಿಯಲ್ಲಿ NH-35 ನಿಂದ ಇಟಾವಾ ಜಿಲ್ಲೆಯ ಕುದುರೆಲ್ ಗ್ರಾಮದವರೆಗೆ ವಿಸ್ತರಿಸುತ್ತದೆ. ಅಲ್ಲಿ ಇದು ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಧಿಸುತ್ತದೆ. ಇದು ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.

ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳನ್ನು ಮಾಡುವ ಕೆಲಸ ಪ್ರಾರಂಭವಾಗಿದೆ.