Saturday, 28th December 2024

Bus Accident: ಬಸ್‌ ಚರಂಡಿಗೆ ಉರುಳಿ 8 ಮಂದಿ ಸಾವು

Bus Accident

ಚಂಡೀಗಢ: ಖಾಸಗಿ ಬಸ್‌ ಚರಂಡಿಗೆ ಉರುಳಿ ಕನಿಷ್ಠ 8 ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ (ಡಿ. 27) ಪಂಜಾಬ್‌ನಲ್ಲಿ ನಡೆದಿದೆ. ʼʼಪಂಜಾಬ್‌ನ ಬತಿಂಡಾದಲ್ಲಿ ಈ ದುರ್ಘಟನೆ ನಡೆದಿದ್ದು, ಐವರು ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆʼʼ ಎಂದು ಸ್ಥಳೀಯ ಶಾಸಕ ಜಗರೂಪ್‌ ಸಿಂಗ್‌ ಗಿಲ್‌ ತಿಳಿಸಿದ್ದಾರೆ (Bus Accident).

ಅಪಘಾತದಲ್ಲಿ ಸುಮಾರು 18 ಮಂದಿ ಗಾಯಗೊಂಡಿದ್ದು, ಅವರನ್ನು ಬತಿಂಡಾದ ಶಹೀದ್‌ ಭಾಯಿ ಮಣಿ ಸಿಂಗ್‌ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಗಿಲ್‌ ಅವರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದು, ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

ʼʼಅಪಘಾತ ನಡೆದ ಸ್ಥಳದಲ್ಲೇ 5 ಮಂದಿ ಮೃತಪಟ್ಟರೆ ಉಳಿದ 3 ಮಂದಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸುಮಾರು 18 ಮಂದಿ ಶಹೀದ್‌ ಭಾಯಿ ಸಿಂಗ್‌ ಸಿವಿಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ ನೀಡಿದ್ದಾರೆʼʼ ಎಂದು ಗಿಲ್‌ ಹಿಂದೂಸ್ತಾನ್‌ ಟೈಮ್ಸ್‌ಗೆ ವಿವರಿಸಿದ್ದಾರೆ.

ಬತಿಂಡಾದ ಜಿವಾನ್‌ ಸಿಂಗ್‌ ವಾಲಾ ಗ್ರಾಮದ ಬಳಿ ಬಸ್‌ ಸೇತುವೆಗೆ ಡಿಕ್ಕಿ ಹೊಡೆದ ಬಳಿಕ ಚರಂಡಿಗೆ ಉರುಳಿ ಬಿದ್ದಿದೆ. ಎನ್‌ಡಿಆರ್‌ಎಫ್‌, ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕ್ರೇನ್‌ ಸಹಾಯದಿಂದ ನೀರೊಳಗಿನಿಂದ ಬಸನ್ನು ಮೇಲಕ್ಕೆತ್ತಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಖಾಸಗಿ ಬಸ್‌ ಪ್ರಯಾಣಕರನ್ನು ತುಂಬಿಕೊಂಡು ತಲ್ವಾಂಡಿ ಸಾಬೋದಿಂದ ಬತಿಂಡಾ ಸಿಟಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅಪಘಾತದ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಚರಂಡಿಗೆ ಉರುಳುವ ಮುನ್ನ ಬಸ್‌ ಸೇತುವೆಗೆ ಡಿಕ್ಕಿ ಹೊಡೆಯಿತು ಎಂದು ಸ್ಥಳೀಯರು ವಿವರಿಸಿದ್ದಾರೆ. ʼʼಘಟನೆ ನಡೆಯುವ ವೇಳೆ ಸ್ಥಳದಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು. ದಾರಿ ಸರಿಯಾಗಿ ಕಾಣದೆ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಅದಾಗ್ಯೂ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೆತ್ತಿಕೊಂಡಿದ್ದೇವೆʼʼ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಡೆಪ್ಯುಟಿ ಕಮಿಷನರ್‌ ಶೌಕತ್‌ ಅಹಮ್ಮದ್‌ ಪರ್ರೆ, ʼʼಅಪಘಾತ ನಡೆದ ಕೂಡಲೇ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Road Accident: ಕಾರಿನ ಮೇಲೆ ಲಾರಿ ಮಗುಚಿ ಬಿದ್ದು 6 ಮಂದಿ ಸಾವು