ನವದೆಹಲಿ: ಬೈಜುಸ್ ಬೆಂಗಳೂರಿನ ಐಬಿಸಿ ನಾಲೆಡ್ಜ್ ಪಾರ್ಕ್ ನಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲಾ ಕಚೇರಿ ಗಳನ್ನು ಮುಚ್ಚಿದೆ. ಮುಂದಿನ ಆದೇಶದವರೆಗೆ ಎಲ್ಲಾ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆಗಳನ್ನು ನೀಡಲಾಗಿದೆ.
ಎಡ್ಟೆಕ್ ಕಂಪನಿ ಬೈಜುಸ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲಾ ಉದ್ಯೋಗಿಗಳಿಗೆ ಅಗತ್ಯಕ್ಕೆ ತಕ್ಕಂತೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ.
ಹೂಡಿಕೆದಾರರೊಂದಿಗೆ ವಿವಾದದಲ್ಲಿ ಸಿಲುಕಿರುವ ಕಂಪನಿಯು ಸುಮಾರು 20,000 ಉದ್ಯೋಗಿಗಳಿಗೆ ಸಂಬಳ ನೀಡುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಈಗ ವೆಚ್ಚವನ್ನು ಕಡಿಮೆ ಮಾಡಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬೈಜುವಿನ ಟ್ಯೂಷನ್ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಈ ನಿರ್ಧಾರದಿಂದ ಕಂಪನಿಗೆ ಲಾಭವಾಗಲಿದೆ. ಇದು ಹಣವನ್ನು ಉಳಿಸುತ್ತದೆ ಎಂದು ಅದು ಹೇಳಿದೆ.
ಈ ಹಿಂದೆ, ಬೈಜು ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಅವರು ಫೆಬ್ರವರಿ ತಿಂಗಳ ಸಂಬಳವು ಮಾ.10 ರೊಳಗೆ ಬರಲಿದೆ ಎಂದು ಉದ್ಯೋಗಿಗಳಿಗೆ ಭರವಸೆ ನೀಡಿದ್ದರು. ಆದರೆ ಕಂಪನಿಯು ಸಂಬಳ ಪಾವತಿಸಲು ವಿಫಲವಾಗಿದೆ. ಕಂಪನಿಯು ತನ್ನ ಎಲ್ಲಾ ಉದ್ಯೋಗಿಗಳಿಗೆ ಭಾಗಶಃ ಪಾವತಿ ಮಾಡಿದೆ ಎಂದು ಭಾನುವಾರ ತಿಳಿಸಿದೆ. ಬಾಕಿ ಪಾವತಿಸಲು ಹೆಚ್ಚಿನ ಸಮಯ ಕೋರಿ ಕಂಪನಿಯ ಆಡಳಿತ ಮಂಡಳಿ ನೌಕರರಿಗೆ ಪತ್ರ ಬರೆದಿದೆ.
ಹೊಸ ಮಂಡಳಿಯ ರಚನೆಗೆ ಸಂಬಂಧಿಸಿದಂತೆ ಬೈಜು ರವೀಂದ್ರನ್ ಮತ್ತು ಕಂಪನಿಯ ಕೆಲವು ಷೇರುದಾರರ ನಡುವೆ ಪ್ರಸ್ತುತ ವಿವಾದ ನಡೆಯುತ್ತಿದೆ.