ಸುಂದರವಾಗಿ ಕಾಣಬೇಕೆಂದು ಕೆಲವರು ಅನೇಕ ಸೌಂದರ್ಯ ಸಲಹೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ವಿಶೇಷವಾಗಿ ಹುಡುಗಿಯರು ತಾವು ಸುಂದರವಾಗಿ ಕಾಣಬೇಕೆಂದು ಪ್ರತಿ ಸಣ್ಣ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅಲ್ಲದೆ, ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅನೇಕ ಸೌಂದರ್ಯ ಸಲಹೆಗಳು ಮತ್ತು ಚರ್ಮದ ಆರೈಕೆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅದು ಕೆಲವು ಕ್ಯಾನ್ಸರ್‌ನಂತಹ(Cancer Cause) ಗಂಭೀರ ಕಾಯಿಲೆಗೆ ಕಾರಣವಾಗಬಹುದಂತೆ. ಅಂತಹ ಕೆಲವು ಸೌಂದರ್ಯ ಸಲಹೆಗಳನ್ನು ತಿಳಿದುಕೊಳ್ಳೋಣ.
ಪೀಲ್ ಅಪ್‍ಗಳ ಅತಿಯಾದ ಬಳಕೆ
ಪೀಲ್ ಅಪ್ ಎಕ್ಸ್ಫೋಲಿಯೇಟಿಂಗ್ ಮೂಲಕ ಚರ್ಮವನ್ನು ಸ್ವಚ್ಛಗೊಳಿಸುತ್ತದೆ ನಿಜ. ಆದರೆ ಸಂಶೋಧನೆಯ ಪ್ರಕಾರ, ರಾಸಾಯನಿಕಯುಕ್ತ ಪೀಲ್ ಅಪ್‍ಗಳನ್ನು ಅತಿಯಾಗಿ ಬಳಸಿದರೆ ಅದರಲ್ಲಿರುವ ಟ್ರೈಕ್ಲೋರೊ ಅಸಿಟಿಕ್ ಆಮ್ಲ ಚರ್ಮಕ್ಕೆ ಅಪಾಯಕಾರಿ ಎಂದು ಸಾಬೀತಾಗಿದೆ. ಏಕೆಂದರೆ ಇದು ಸಂಭಾವ್ಯ ಕ್ಯಾನ್ಸರ್ ಕಾರಕವಾಗಿದೆಯಂತೆ.
ಹೇರ್ ಸ್ಟ್ರೈಟ್ನಿಂಗ್ ಉತ್ಪನ್ನಗಳ ಬಳಕೆ
ಕೂದಲನ್ನು ಸ್ಟ್ರೈಟ್ ಮಾಡಲು ಬಳಸುವ ಉತ್ಪನ್ನಗಳು ಗರ್ಭಾಶಯ, ಸ್ತನ ಮತ್ತು ಅಂಡಾಶಯದಂತಹ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿರುವ ಫಾರ್ಮಾಲ್ಡಿಹೈಡ್‍ನಂತಹ ಕ್ಯಾನ್ಸರ್‌ಕಾರಕಗಳು ಕೂದಲಿನ ಕಿರುಚೀಲಗಳ ಮೂಲಕ ಚರ್ಮದ ಒಳಗೆ ಹೋಗುತ್ತವೆ ಅಥವಾ ಅವುಗಳ ಸುಗಂಧವು ಮೂಗಿನ ಮೂಲಕ ದೇಹದೊಳಗೆ ಹೋಗುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅವುಗಳನ್ನು ನಿಯಮಿತ ಬಳಕೆ ಮಾಡಿದರೆ ಕ್ಯಾನ್ಸರ್ ಅಪಾಯ ಕಾಡುತ್ತದೆಯಂತೆ.
ವಿಟಮಿನ್ ಡಿ ಪೂರೈಕೆಗಾಗಿ ಸೂರ್ಯಸ್ನಾನ
ಸೂರ್ಯನ ಕಿರಣಗಳು ವಿಟಮಿನ್ ಡಿ ಅನ್ನು ಪೂರೈಸುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೂ ಹೆಚ್ಚು ಹೊತ್ತು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಅದರ ಹಾನಿಕಾರಕ ಯುವಿ ಕಿರಣಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಸನ್ ಸ್ಕ್ರೀನ್ ಬಳಕೆ
ಮಾರುಕಟ್ಟೆಯಲ್ಲಿ ಹಲವು ವಿಧದ ಸನ್‍ಸ್ಕ್ರೀನ್‍ಗಳು ದೊರೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಮನೆಯಲ್ಲಿಯೇ ಸನ್‌ಸ್ಕ್ರೀನ್ ತಯಾರಿಸಿ ಹಚ್ಚುತ್ತಾರೆ. ಆದರೆ ಇದನ್ನು ಹಚ್ಚಿ ಹೊರಗಡೆ ಹೋದಾಗ ಇದರಲ್ಲಿ ಎಸ್‍ಪಿಎಫ್ ಅಂಶ ಇರದ ಕಾರಣ ಇದು ನೇರವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ:ಕೆಟ್ಟ ಕೊಲೆಸ್ಟ್ರಾಲ್ ನೈಸರ್ಗಿಕವಾಗಿ ಕಡಿಮೆ ಮಾಡಲು ಈ ಬೀಜಗಳನ್ನು ಸೇವಿಸಿ
ಹಾಗಾಗಿ ಈ ಸೌಂದರ್ಯ ಸಲಹೆಗಳನ್ನು ಪ್ರಯತ್ನಿಸುವುದನ್ನು ತಪ್ಪಿಸಿ, ನಿಮ್ಮ ಸೌಂದರ್ಯದ ಜೊತೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.