Sunday, 15th December 2024

ಸಿಬಿಐ ಕೂಡ ಸ್ವಾಯತ್ತವಾಗಿ ಕೆಲಸ ಮಾಡಲಿ: ಮದ್ರಾಸ್ ಹೈಕೋರ್ಟ್‌

ಚೆನ್ನೈ: ಚುನಾವಣಾ ಆಯೋಗದಂತೆ ಕೇಂದ್ರ ತನಿಖಾ ದಳ ಸಹ ಸ್ವಾಯತ್ತವಾಗಿ ಕೆಲಸ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ತಿಳಿಸಿದೆ.

ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದ ವಂಚನೆಯ ಪ್ರಕರಣದ ವಿಚಾರಣೆ ವೇಳೆ, ನ್ಯಾಯಾಧೀಶರಾದ ಎನ್. ಕಿರುಬಾಕರನ್ ಹಾಗೂ ಪಿ ಪುಗಲೆಂದಿ, “ಸಿಬಿಐ ಚುನಾವಣಾ ಆಯೋಗದಂತೆ ಸ್ವತಂತ್ರವಾಗಿ ಕೆಲಸ ಮಾಡ ಬೇಕು. ಸಿಬಿಐಗೆ ಅಗತ್ಯವಿರುವ ದುಡ್ಡನ್ನು ಪ್ರತಿ ವರ್ಷದ ಬಜೆಟ್‌ನಲ್ಲಿ ಮಂಜೂರು ಮಾಡಬೇಕು,” ಎಂದಿದ್ದಾರೆ.

“ಸಿಬಿಐ ನಿದೇರ್ಶಕರಿಗೆ ನೇರವಾಗಿ ಪ್ರಧಾನ ಮಂತ್ರಿಗೆ ವರದಿ ಮಾಡಿಕೊಳ್ಳುವಂತೆ ಸಂಪುಟ ಸಚಿವರ ಹಾಗೆ ವಿಶೇಷ ಅಧಿಕಾರ ನೀಡಬೇಕು. ಜೊತೆಗೆ ಕೇಂದ್ರ ಸರ್ಕಾರದ ಆಡಳಿತದ ಅಡಿ ಬರದೇ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬೇಕು,” ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಸಿಬಿಐಗೆ ಅಮೆರಿಕದ ಎಫ್‌ಬಿಐ ಹಾಗೂ ಬ್ರಿಟನ್‌ನ ಸ್ಕಾಟ್ಲೆಂಡ್ ಯಾರ್ಡ್‌ನಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸ ಬೇಕು. ಸೈಬರ್‌, ವಿಧಿ ವಿಜ್ಞಾನ ಹಾಗೂ ಆರ್ಥಿಕ ಆಡಿಟಿಂಗ್ ಮಾಡಲು ಬೇಕಾದ ತಜ್ಞರ ನೇಮಕಾತಿ ಸಂಬಂಧ ಅಗತ್ಯ ನೀತಿ ನಿರ್ಣಯಗಳನ್ನು ಆರು ವಾರಗಳ ಒಳಗೆ ತೆಗೆದುಕೊಳ್ಳಬೇಕು.

ಖಾಲಿ ಇರುವ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು,” ಎಂದು ನ್ಯಾಯಾಲಯ ಆದೇಶಿಸಿದೆ.