Saturday, 23rd November 2024

ಅಬಕಾರಿ ನೀತಿಗೆ ವಿರೋಧ: ಚಕ್ಕಾ ಜಾಮ್ ಪ್ರತಿಭಟನೆ

ನವದೆಹಲಿ: ಎಎಪಿ ಸರಕಾರದ ಹೊಸ ಅಬಕಾರಿ ನೀತಿಯನ್ನು ವಿರೋಧಿಸಿ ದೆಹಲಿಯ ಬಿಜೆಪಿ ಕಾರ್ಯಕರ್ತರು ಚಕ್ಕಾ ಜಾಮ್ ಪ್ರತಿಭಟನೆ ನಡೆಸಿದರು.

ಅಕ್ಷರಧಾಮ ದೇವಸ್ಥಾನದ ಬಳಿ ಮತ್ತು ರಿಂಗ್ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅಕ್ಷರಧಾಮ ಮೇಲ್ಸೇತುವೆ ಬಳಿ, ವಿಕಾಸ್ ಮಾರ್ಗದ ಕಾರ್ ಬಜಾರ್, ಎನ್‌ಎಚ್ -24, ದಯಾರಾಮ್ ಚೌಕ್, ಐಟಿಒ, ರಿಂಗ್ ರಸ್ತೆ, ಸಿಗ್ನೇಚರ್ ಸೇತುವೆ ಮತ್ತು ಸಿವಿಲ್ ಲೈನ್ಸ್ ಬಳಿ ಸೇರಿದಂತೆ 15 ಸ್ಥಳಗಳಲ್ಲಿ “ಚಕ್ಕಾ ಜಾಮ್” ಪ್ರತಿಭಟನೆ ನಡೆಸಲಾಗುತ್ತಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ನೇತೃತ್ವದಲ್ಲಿ ಅಕ್ಷರಧಾಮ ದೇವಸ್ಥಾನದ ಬಳಿ ಪ್ರತಿಭಟನೆ ನಡೆಯಿತು. “ದಿಲ್ಲಿ ಸರಕಾರವು ತನ್ನ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ನಗರದಾದ್ಯಂತ ಅಕ್ರಮವಾಗಿ ಮದ್ಯದ ಅಂಗಡಿಗಳನ್ನು ತೆರೆಯುತ್ತಿದೆ. ವಸತಿ ಮತ್ತು ಧಾರ್ಮಿಕ ಸ್ಥಳಗಳ ಬಳಿ ಅಂಗಡಿಗಳನ್ನು ತೆರೆಯಲಾಗುತ್ತಿದೆ. ನೀತಿಯನ್ನು ಹಿಂತೆಗೆದುಕೊಳ್ಳುವವರೆಗೆ ನಮ್ಮ ಪ್ರತಿಭಟನೆಯು ಮುಂದುವರಿಯುತ್ತದೆ” ಎಂದು ತಿಳಿಸಿದರು.

ಧಾರ್ಮಿಕ ಸ್ಥಳಗಳು, ಶಾಲೆಗಳು ಮತ್ತು ವಸತಿ ಪ್ರದೇಶಗಳ ಬಳಿ ಮದ್ಯದಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಹಿರಿಯ ಬಿಜೆಪಿ ನಾಯಕ ಕುಲ್ಜೀತ್ ಚಹಾಲ್ ಐಟಿಒದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಹೊಸ ಅಬಕಾರಿ ನೀತಿಯು ಅಕ್ರಮ ಮದ್ಯ ಮಾರಾಟವನ್ನು ತಡೆಯುವ ಗುರಿಯನ್ನು ಹೊಂದಿದೆ. ಆದರೆ ಅದನ್ನು ಬಿಜೆಪಿ ನಾಯಕರು ರಾಜಕೀಯ ಎಂದು ಕರೆದಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.

ಪ್ರತಿಭಟನೆಯಿಂದಾಗಿ ಬೆಳಿಗ್ಗೆ ಕಚೇರಿ ಸಮಯದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆಗೆ ಕಾರಣವಾಯಿತು. ಯಾವುದೇ ಆಟೋರಿಕ್ಷಾಗಳು ಅಥವಾ ಕ್ಯಾಬ್‌ಗಳು ಸಂಚಾರಕ್ಕೆ ಸಾಧ್ಯವಾಗದೆ ಮತ್ತು ಮೆಟ್ರೋ ನಿಲ್ದಾಣಗಳ ಹೊರಗೆ ದೊಡ್ಡ ಸರತಿ ಸಾಲುಗಳು ಇದ್ದವು.

ಹೊಸ ಅಬಕಾರಿ ನೀತಿಯಡಿ ನಗರದಾದ್ಯಂತ 849 ಪ್ರೀಮಿಯಂ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಈ ನೀತಿಯನ್ನು ನಗರದಲ್ಲಿ ನವೆಂಬರ್ 17, 2021 ರಿಂದ ಜಾರಿಗೆ ತರಲಾಯಿತು.