ನವದೆಹಲಿ: ಜಾರ್ಖಂಡ್ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ ದ ಹಿರಿಯ ನಾಯಕ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಈ ವರ್ಷ ಜಾರ್ಖಂಡ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ಬೆಳವಣಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಶನಿವಾರ ಚಂಪೈ ಸೊರೆನ್ ಕೋಲ್ಕತ್ತಾದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಸದ್ಯ ಚಂಪೈ ಸೊರೆನ್ ಅವರು ಜೆಎಂಎಂನ ನಾಲ್ವರು ನಾಯಕರೊಂದಿಗೆ ದೆಹಲಿಗೆ ಹಾರಿದ್ದಾರೆ. ಇತ್ತ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಚಂಪೈ ಸೊರೆನ್ ತಾವು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಸುದ್ದಿಯನ್ನು ನಿರಾಕರಿಸಿದ್ದರು. ʼʼಈ ರೀತಿಯ ಬೆಳವಣಿಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲʼʼ ಎಂದು ಹೇಳಿದ್ದರು.
ಸದ್ಯ ಚಂಪೈ ಸೊರೆನ್ ಅವರ ದೆಹಲಿ ಪ್ರವಾಸ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವಾಗಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿರುವ ಜೆಎಂಎಂ ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಅವರನ್ನು ಸಂಪೈ ಸೊರೆನ್ ಇತ್ತೀಚೆಗೆ ಭೇಟಿಯಾಗಿದ್ದರು. ಅದಾದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಹೆಂಬ್ರೋಮ್ ಅವರನ್ನು ಇತ್ತೀಚೆಗೆ ಜೆಎಂಎಂ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಆದರೆ ಚಂಪೈ ಸೊರೆನ್ ವೈಯಕ್ತಿಕ ಅಗತ್ಯಗಳಿಗಾಗಿ ದೆಹಲಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.