ಚಂಡೀಗಢ: ಚಂಡೀಗಢದ ಎರಡು ನೈಟ್‌ಕ್ಲಬ್‌ಗಳ (Night Club) ಬಳಿ ಅವಳಿ ಬಾಂಬ್ ಸ್ಫೋಟವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ, ಸ್ಫೋಟದಿಂದಾಗಿ ಹಲವಾರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಕಚ್ಚಾ ಬಾಂಬ್‌ಗಳಿಂದ (Crude Bombs) ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಮುಂಜಾನೆ 3.15 ರ ಸರಿ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನೈಟ್‌ಕ್ಲಬ್‌ಗಳ ಮೇಲೆ ಕಡಿಮೆ ತೀವ್ರತೆಯ (Low Intensity) ಬಾಂಬ್ ಎಸೆದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ. ವ್ಯಕ್ತಿಯಿಬ್ಬರು ಬಾಂಬ್ ಎಸೆದು ಓಡಿ ಹೋಗುತ್ತಿರುವ ದೃಶ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. (Chandigarh Bomb Blast)
ಸ್ಫೋಟಕ್ಕೆ ಒಳಗಾದ ನೈಟ್ ಕ್ಲಬ್ ಖ್ಯಾತ ರಾಪರ್ ಗಾಯಕ ಬಾದ್ ಶಾ (Badshah) ಅವರಿಗೆ ಸೇರಿದ್ದು, ಸ್ಫೋಟಗೊಂಡ ಬಾಂಬ್ ಪರಿಣಾಮವಾಗಿ ಅವರ ರೆಸ್ಟೋರೆಂಟ್ ನ ಗಾಜು ಒಡೆದು ಹೋಗಿರುವುದು ಕಂಡು ಬಂದಿದೆ. ಘಟನೆಯ ಕುರಿತು ಈವರೆಗೆ ಬಾದ್ ಶಾ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ ಎನ್ನಲಾಗುತ್ತಿದೆ.
ಸ್ಫೋಟ ಸಂಭವಿಸಿದ ವೇಳೆ ಜೋರಾದ ಶಬ್ದವನ್ನು ಕೇಳಿ ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬರು ಹೊರಗೆ ಓಡಿ ಬಂದಿದ್ದಾರೆ. “ ಸ್ಫೋಟಗೊಂಡ ಸದ್ದು ಕೇಳಿದ ಕೂಡಲೇ ನಾವು ಹೊರಗಡೆಗೆ ಓಡಿ ಬಂದೆವು. ಬಾಗಿಲಿನ ಗಾಜು ಒಡೆದು ಹೋಗಿತ್ತು. ಸ್ಫೋಟ ಸಂಭವಿಸಿದ ಸಮಯದಲ್ಲಿ ರೆಸ್ಟೋರೆಂಟ್ ಒಳಗೆ 7-8 ಕಾರ್ಮಿಕರು ಇದ್ದರು. ಯಾರಿಗೂ ಹಾನಿಯಾಗಿಲ್ಲ. ಬೆಳಗಿನ ಜಾವ 3:15ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದೇವೆ” ಎಂದು ಪೂರನ್ ಎಂಬ ರೆಸ್ಟೋರೆಂಟ್ ನ ಉದ್ಯೋಗಿ ತಿಳಿಸಿದ್ದಾರೆ.
ಚಂಡೀಗಢ ಪೊಲೀಸರ ವಿಧಿವಿಜ್ಞಾನ ತಂಡಗಳು ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿವೆ. ಈ ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಇದು ಬಾಂಬ್ ಅಥವಾ ಮತ್ಯಾವುದೋ ಸ್ಫೋಟಕ ವಸ್ತು ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆ ಕುರಿತು ಈವರೆಗೆ ಯಾವುದೇ ಸ್ಪಷ್ಟತೆ ಸಿಕ್ಕಿರುವುದಿಲ್ಲ. ವಿಧಿವಿಜ್ಞಾನ ತಜ್ಞರು ಮತ್ತು ಇತರ ತನಿಖಾ ಸಂಸ್ಥೆಗಳು ಸೇರಿದಂತೆ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಲೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಹ್ಯಾಂಡ್ ಗ್ರೆನೇಡ್ ದಾಳಿ
ಎರಡು ತಿಂಗಳ ಹಿಂದೆಯಷ್ಟೇ ಅಂದರೆ ಸೆಪ್ಟೆಂಬರ್ 11 ರಂದು ಆಟೋದಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಚಂಡೀಗಢದ ಸೆಕ್ಟರ್ -10 ರ ಕೋಠಿ ನಂ. 575 ರ ಮೇಲೆ ಹ್ಯಾಂಡ್ ಗ್ರೆನೇಡ್ (Hand Grenade) ಬಾಂಬ್‌ನಿಂದ ದಾಳಿ ನಡೆಸಿದ್ದರು. ಆ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಆದರೆ ಮನೆಯ ಎಲ್ಲಾ ಗಾಜಿನ ಕಿಟಕಿಗಳು ಒಡೆದು ಹೋಗಿದ್ದವು.
ಈ ಪ್ರಕರಣದಲ್ಲಿ ವಿದೇಶದಲ್ಲಿ ನೆಲೆಸಿರುವ ಹ್ಯಾಪಿ ಪಾಶಿಯಾ ಎಂಬಾತನ ಹೆಸರು ಬೆಳಕಿಗೆ ಬಂದಿತ್ತು. ಆತ ಪಂಜಾಬ್ ಪೊಲೀಸ್‌ನಲ್ಲಿ ಎಸ್‌ಪಿ ಹುದ್ದೆಯಿಂದ ನಿವೃತ್ತರಾದ ಜಸ್ಕಿರತ್ ಸಿಂಗ್ ಚಾಹಲ್‌ನನ್ನು ಕೊಲ್ಲಲು ಯತ್ನಿಸಿದ್ದ ಎನ್ನಲಾಗಿತ್ತು. ಪಂಜಾಬ್ ಪೊಲೀಸರ ವಿಶೇಷ ತಂಡಗಳು ಕೇವಲ 72 ಗಂಟೆಗಳಲ್ಲಿ ಇಬ್ಬರು ಬಾಂಬ್ ಎಸೆದ ಆರೋಪಿಗಳನ್ನು (ರೋಹನ್ ಮಸಿಹ್ ಮತ್ತು ವಿಶಾಲ್ ಮಸಿಹ್) ಅಮೃತಸರ ಮತ್ತು ದೆಹಲಿಯಿಂದ ಬಂಧಿಸಿದರು.
ಈ ಸುದ್ದಿಯನ್ನೂ ಓದಿ : Bomb Threat: ಪ್ರಯಾಣಿಕನ ಬಳಿ ಬಾಂಬ್ ಇದೆ… ಮುಂಬೈ ಏರ್‌ಪೋರ್ಟ್‌ಗೆ ಮತ್ತೆ ಬೆದರಿಕೆ