Saturday, 21st December 2024

ಯೆಸ್‌ ಬ್ಯಾಂಕ್‌ ಮಾಜಿ ಸಿಇಒ ರಾಣಾ ಕಪೂರ್‌ ವಿರುದ್ಧ ಆರೋಪಪಟ್ಟಿ ದಾಖಲು

ಮುಂಬೈ: ಖಾಸಗಿ ವಲಯದ ಯೆಸ್‌ ಬ್ಯಾಂಕ್‌ನ ಸಹ ಸಂಸ್ಥಾಪಕ, ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್‌ ವಿರುದ್ಧ ಸಿಬಿಐ 466 ಕೋಟಿ ರೂ.ಗಳ ವಂಚನೆ (YES Bank) ಪ್ರಕರಣಕ್ಕೆ ಸಂಬಂಧಿಸಿ ಆರೋಪಪಟ್ಟಿ ದಾಖಲಿಸಿದೆ. ಅವಂತ ಗ್ರೂಪ್‌ನ ಪ್ರವರ್ತಕ ಗೌತಮ್‌ ಥಾಪರ್‌ ವಿರುದ್ಧ ಕೂಡ ಆರೋಪಪಟ್ಟಿ ದಾಖಲಾಗಿದೆ.

ಕಳೆದ‌ ವರ್ಷ ಜೂನ್ 2ರಂದು ದಾಖಲಾಗಿದ್ದ ಎಫ್‌ ಐಆರ್‌ನಲ್ಲಿ ರಾಣಾ ಕಪೂರ್‌ ಅವರ ಹೆಸರು ಶಂಕಿತರ ಪಟ್ಟಿಯಲ್ಲಿ ಇದ್ದಿರ ಲಿಲ್ಲ. ಹೀಗಿದ್ದರೂ, ತನಿಖೆಯ ಬಳಿಕ ಈ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ 40 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳ ಲಾಗಿದೆ. ಕೃಷಿ ಭೂಮಿ, ಫ್ಲ್ಯಾಟ್‌ಗಳು ಇದರಲ್ಲಿ ಇವೆ. ಇವುಗಳ ಮೌಲ್ಯ 41 ಕೋಟಿ ರೂ. ಜತೆಗೆ 35 ಬ್ಯಾಂಕ್‌ ಖಾತೆಯಲ್ಲಿನ 8 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ.

65 ವರ್ಷ ವಯಸ್ಸಿನ ರಾಣಾ ಕಪೂರ್‌ ಅಶೋಕ್‌ ಕಪೂರ್‌ ಜತೆಗೂಡಿ 18 ವರ್ಷಗಳ ಹಿಂದೆ, 2004ರಲ್ಲಿ ಯೆಸ್‌ ಬ್ಯಾಂಕ್‌ ಅನ್ನು ಸ್ಥಾಪಿಸಿದ್ದರು. 2013ರಲ್ಲಿ ಕೈಗಾರಿಕಾ ಮಂಡಳಿ ಅಸೊಚೆಮ್‌ ಅಧ್ಯಕ್ಷರಾಗಿದ್ದರು. ಅಶೋಕ್‌ ಕಪೂರ್‌ ಅವರು 2008ರ 26/11 ರಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿ ದ್ದರು. ಬಳಿಕ ರಾಣಾ ಕಪೂರ್‌ ಅವರೇ ಬ್ಯಾಂಕಿನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರು. ಈ ಹಿಂದೆ ಜಾರಿ ನಿರ್ದೇಶನಾಲಯ ಕೂಡ ಬ್ಯಾಂಕ್‌ ವಂಚನೆ ಕೇಸ್‌ಗೆ ಸಂಬಂಧಿಸಿ ರಾಣಾ ಕಪೂರ್‌ ಅವರನ್ನು ಬಂಧಿಸಿತ್ತು. ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು.