Friday, 22nd November 2024

Chennai Air Show: ಚೆನ್ನೈ ಏರ್‌ ಶೋ ವೇಳೆ 4 ಮಂದಿಯ ಸಾವಿಗೆ ಡಿಎಂಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ಆಕ್ರೋಶ

Chennai Air Show

ಚೆನ್ನೈ: ತಮಿಳುನಾಡಿನ ಚೆನ್ನೈನ ಮರೀನಾ ಬೀಚ್‌ನಲ್ಲಿ (Marina beach) ಭಾನುವಾರ (ಅಕ್ಟೋಬರ್‌ 6) ಆಯೋಜಿಸಿದ್ದ ಏರ್ ಶೋ (Chennai Air Show) ವೀಕ್ಷಿಸಲು ತೆರಳಿದ್ದ 4 ಮಂದಿ ಹೀಟ್‌ ಸ್ಟ್ರೋಕ್‌ನಿಂದ (Heat stroke) ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡ ಸುಮಾರು 200 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಸರ್ಕಾರದ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಬಿಜೆಪಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (MK Stalin) ವಿರುದ್ಧ ಕಿಡಿಕಾರಿದೆ. ಸಾವಿರಾರು ಜನ ಸೇರುವ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಮಾಡದಿದ್ದುದೇ ಈ ಅನಾಹುತಕ್ಕೆ ಕಾರಣ ಎಂದು ತಮಿಳುನಾಡಿನ ಬಿಜೆಪಿ ಮುಖಂಡ ಅಣ್ಣಾಮಲೈ (Annamalai) ದೂರಿದ್ದಾರೆ.

ಜನದಟ್ಟಣೆ, ಶಾಖದ ಹೊಡೆತ ಮತ್ತು ಮೂಲಭೂತ ವ್ಯವಸ್ಥೆಗಳ ಕೊರತೆಯಿಂದಾಗಿ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಅಣ್ಣಾಮಲೈ ಹೇಳಿದ್ದೇನು?

“ಚೆನ್ನೈ ಮರೀನಾ ಬೀಚ್‌ನಲ್ಲಿ ನಡೆದ ಐಎಎಫ್‌ನ ಏರ್ ಶೋ ವೇಳೆ ಜನಸಂದಣಿಯಿಂದಾಗಿ 5 ಮಂದಿ ಮೃತಪಟ್ಟಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು. ಐಎಎಫ್ ಏರ್ ಶೋ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಮತ್ತು ಸಾಕಷ್ಟು ಸಾರಿಗೆ ವ್ಯವಸ್ಥೆಗಳನ್ನು ಒದಗಿಸದೆ ಡಿಎಂಕೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದೇ ಇದಕ್ಕೆ ಮುಖ್ಯ ಕಾರಣ” ಎಂದು ಅಣ್ಣಾಮಲೈ ಎಕ್ಸ್‌ (ಹಿಂದಿನ ಟ್ವಿಟ್ಟರ್‌)ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದುರಂತವನ್ನು ʼಅಪಘಾತʼ ಎಂದು ತಳ್ಳಿಹಾಕಲಾಗುವುದಿಲ್ಲ ಮತ್ತು ಇದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಆಡಳಿತದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. “ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಡಿಎಂಕೆ ಸರ್ಕಾರವು ತಮ್ಮ ಕುಟುಂಬಕ್ಕಾಗಿ ಮಾತ್ರ ಆಡಳಿತ ನಡೆಸುತ್ತಿದೆ. ಜನರ ಜೀವನದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಾರ್ವಜನಿಕರಿಗೆ ಉತ್ತರಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಕೂಡ ಘಟನೆಗೆ ಆಘಾತ ವ್ಯಕ್ತಪಡಿಸಿ ಆಡಳಿತರೂಢ ಡಿಎಂಕೆಯ ವಿರುದ್ಧ ಕಿಡಿಕಾರಿದ್ದರು. “ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸಲು ವಿಫಲವಾದ ಈ ಎಂ.ಕೆ.ಸ್ಟಾಲಿನ್ ಸರ್ಕಾರದ ನಡೆಯನ್ನು ಬಲವಾಗಿ ಖಂಡಿಸುತ್ತೇನೆʼʼ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Chennai Air Show: ಚೆನ್ನೈ ಏರ್‌ ಶೋದಲ್ಲಿ ಬಿಸಿಲಿನ ಝಳಕ್ಕೆ 3 ಸಾವು

ಏರ್ ಶೋ

ಭಾರತೀಯ ಏರ್‌ ಫೋರ್ಸ್‌ನ (Indian Air Force) 92ನೇ ದಿನಾಚರಣೆಯ ಸಂದರ್ಭದಲ್ಲಿ ಏರ್ ಶೋ ಚೆನ್ನೈಯಲ್ಲಿ ಏರ್ಪಡಿಸಲಾಗಿತ್ತು. ಇದನ್ನು ವೀಕ್ಷಿಸಲು ಕುಟುಂಬ ಸಮೇತ ಲಕ್ಷಾಂತರ ಮಂದಿ ಸೇರಿದ್ದರು. ಬೆಳಿಗ್ಗೆ 11 ಗಂಟೆಗೂ ಮೊದಲೇ ಮರೀನಾ ಬೀಚ್‌ನಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಹೆಚ್ಚು ಬಿಸಿಲು ಇತ್ತು. ಬಹು ನಿರೀಕ್ಷಿತ ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಸುಮಾರು 15 ಲಕ್ಷ ಜನರು ಬೀಚ್‌ನಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ. ಅಲ್ಲದೆ ಈ ಏರ್‌ ಶೋಗೆ ಸುಮಾರು 16 ಲಕ್ಷ ಮಂದಿಯನ್ನು ಸೇರಿಸಿ ದಾಖಲೆ ನಿರ್ಮಿಸುವ ಉದ್ಧೇಶವೂ ಇತ್ತು. ಆದರೆ ಬಿಸಿಲಿನ ಝಳ, ಸೌಲಭ್ಯಗಳ ಕೊರತೆಯಿಂದ ಅನಾಹುತ ಸಂಭವಿಸಿದೆ.