Sunday, 15th December 2024

Chennai Air Show: ಚೆನ್ನೈ ಏರ್‌ ಶೋದಲ್ಲಿ ಬಿಸಿಲಿನ ಝಳಕ್ಕೆ 3 ಸಾವು

chennai air show

ಚೆನ್ನೈ: ಚೆನ್ನೈನ ಮರೀನಾ ಬೀಚ್‌ನಲ್ಲಿ (Marina beach) ಏರ್ ಶೋ (Chennai Air Show) ವೀಕ್ಷಿಸಲು ತೆರಳಿದ್ದ ಮೂವರು ಸಾವನ್ನಪ್ಪಿದ್ದಾರೆ. ಈ ಸಾವುಗಳು ಹೀಟ್‌ ಸ್ಟ್ರೋಕ್‌ನಿಂದ (Heat Stroke) ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಒಬ್ಬರಿಗೆ ಹೀಟ್‌ ಸ್ಟ್ರೋಕ್‌ ಆಗಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಭಾರತೀಯ ಏರ್‌ ಫೋರ್ಸ್‌ನ (Indian Air Force) 92ನೇ ದಿನಾಚರಣೆಯ ಸಂದರ್ಭದಲ್ಲಿ ಏರ್ ಶೋ ಏರ್ಪಡಿಸಲಾಗಿತ್ತು. ಇದನ್ನು ವೀಕ್ಷಿಸಲು ವೀಕ್ಷಕರು ಕುಟುಂಬ ಸಮೇತ ಹುಮ್ಮಸ್ಸಿನಿಂದ ಸೇರಿದ್ದರು. ಬೆಳಿಗ್ಗೆ 11 ಗಂಟೆಗೂ ಮೊದಲೇ ಮರೀನಾ ಬೀಚ್‌ನಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಹೆಚ್ಚು ಬಿಸಿಲು ಇತ್ತು. ಹೆಚ್ಚಿನವರು ಛತ್ರಿಗಳನ್ನು ಹಿಡಿದುಕೊಂಡು ಬಿಸಿಲಿನಿಂದ ರಕ್ಷಣೆ ಪಡೆದರು.

ಏರ್ ಶೋದಲ್ಲಿ ವಿಶೇಷ ಗರುಡ ಫೋರ್ಸ್ ಕಮಾಂಡೋಗಳ ಸಿಮ್ಯುಲೇಟೆಡ್ ರಕ್ಷಣಾ ಕಾರ್ಯಾಚರಣೆ ಪ್ರದರ್ಶಿಸಲಾಯಿತು. ಇದರಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರದರ್ಶನ ಒಳಗೊಂಡಿತ್ತು. ಜೊತೆಗೆ ರಫೇಲ್ ಸೇರಿದಂತೆ 72 ವಿಮಾನಗಳನ್ನು ಪ್ರದರ್ಶಿಸಲಾಯಿತು. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂದ್ ಮತ್ತು ಹೆರಿಟೇಜ್ ವಿಮಾನ ಡಕೋಟಾ ಪ್ರದರ್ಶಿತಗೊಂಡವು.

2024ರ ಬಹು ನಿರೀಕ್ಷಿತ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಸುಮಾರು 15 ಲಕ್ಷ ಜನರು ಬೀಚ್‌ನಲ್ಲಿ ಜಮಾಯಿಸಿದ್ದರು. 21 ವರ್ಷಗಳ ಬಳಿಕ ಏರ್‌ ಶೋ ಚೆನ್ನೈಯಲ್ಲಿ ನಡೆಯುತ್ತಿದೆ. ಈ ಹಿಂದಿನ ಏರ್‌ ಶೋ 2003ರಲ್ಲಿ ನಡೆದಿತ್ತು. ಹೆಚ್ಚಾಗಿ ಇದು ದಿಲ್ಲಿಯಲ್ಲಿ ನಡೆಯುತ್ತಿತ್ತು. ಮೂರು ವರ್ಷಗಳಿಂದ ಇತರ ನಗರಗಳಿಗೆ ಸಾಗಿದೆ. 2022ರಲ್ಲಿ ಚಂಡೀಗಢ, 2023ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದಿತ್ತು.

ಚೆನ್ನೈ ಏರ್‌ ಶೋವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಸಚಿವರು, ಸಂಸದರು ಮತ್ತು ಸಶಸ್ತ್ರ ಪಡೆಗಳ ಇತರ ಹಿರಿಯ ಅಧಿಕಾರಿಗಳು ವೀಕ್ಷಿಸಿದರು. ಐಎಎಫ್‌ನ 72 ವಿಮಾನಗಳ ಅದ್ಭುತ ಪ್ರದರ್ಶನವನ್ನು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದರು. ಪ್ರದರ್ಶನವು “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್” ಅನ್ನು ಪ್ರವೇಶಿಸಿತು.

ಇದನ್ನೂ ಓದಿ: Aero India Show 2025: ಫೆ.10ರಿಂದ ಬೆಂಗಳೂರಿನಲ್ಲಿ ‘ಏರೋ ಇಂಡಿಯಾ-2025’ ವೈಮಾನಿಕ ಪ್ರದರ್ಶನ