Sunday, 22nd December 2024

Chennai Horror: ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ವೈದ್ಯರಿಗೆ ಏಳು ಬಾರಿ ಚಾಕು ಇರಿದ ಯುವಕ; ವಿಡಿಯೋ ಇದೆ

Chennai horror

ಚೆನ್ನೈ: ತನ್ನ ತಾಯಿಗೆ ಚಿಕಿತ್ಸೆ ನೀಡಿದ ವೈದ್ಯನನ್ನೇ ವ್ಯಕ್ತಿಯೋರ್ವ ಬರೋಬ್ಬರಿ ಏಳು ಬಾರಿ ಚಾಕುವಿನಿಂದ ಬರ್ಬರವಾಗಿ ಇರಿದಿರುವ ಘಟನೆ ಚೆನ್ನೈನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ(Chennai Horror). ಚೆನ್ನೈ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಸರ್ಕಾರಿ ವೈದ್ಯರೊಬ್ಬರಿಗೆ ಯುವಕನೊಬ್ಬ ಏಳು ಬಾರಿ ಇರಿದಿದ್ದಾನೆ(Doctor stabbed). ಕಲೈಂಗರ್ ಸೆಂಟೆನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ವೈದ್ಯ ಬಾಲಾಜಿ ಮೇಲೆ ಚಾಕು ಇರಿತವಾಗಿದೆ.

ಆರೋಪಿ ವಿಘ್ನೇಶ್‌ ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕೋಪಕ್ಕೆ ವೈದ್ಯ ಬಾಲಾಜಿಯವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಬಾಲಾಜಿ ಅವರ ಎದೆಯ ಮೇಲ್ಭಾಗಕ್ಕೆ ಗಾಯಗಳಾಗಿವೆ. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇನ್ನು ಈ ಸಂಬಂಧ ವಿಡಿಯೊವೊಂದು ವೈರಲ್‌ ಆಗಿದ್ದು, ಆಸ್ಪತ್ರೆಯ ನೆಲದ ತುಂಬೆಲ್ಲಾ ರಕ್ತ ಬಿದ್ದಿರುವುದನ್ನು ಕಾಣಬಹುದಾಗಿದೆ.

ಏನಿದು ಘಟನೆ?

ಆರೋಪಿ ವಿಘ್ನೇಶ್‌ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಭಾವಿಸಿದ ಆರೋಪಿ ವೈದ್ಯರ ಕ್ಯಾಬಿನ್‌ಗೆ ನುಗ್ಗಿ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ತಿಳಿಸಿದ್ದಾರೆ. ಇನ್ನು ಆರೋಪಿ ವಿಘ್ನೇಶ್‌ನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಸಿಎಂ ಸ್ಟ್ಯಾಲಿನ್‌ ಕಿಡಿ

ಘಟನೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಎಂ.ಕೆ. ಸ್ಟ್ಯಾಲಿನ್‌, ಸಮಯವನ್ನು ಲೆಕ್ಕಿಸದೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಮ್ಮ ಸರ್ಕಾರಿ ವೈದ್ಯರ ನಿಸ್ವಾರ್ಥ ಕೆಲಸ ಅಪಾರವಾಗಿದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Kolkata Horror: ಕೋಲ್ಕತ್ತಾ ವೈದ್ಯೆ ಕೊಲೆ ಹಿಂದೆ ಇದ್ಯಾ ಪೊಲೀಸ್ ಕಮಿಷನರ್ ಕೈವಾಡ? ಮಾಧ್ಯಮದೆದುರು ಆರೋಪಿ ಕಿರುಚಾಡಿದ್ದೇಕೆ? ವಿಡಿಯೊ ವೈರಲ್‌