Tuesday, 12th November 2024

Chess Olympiad: ಇತಿಹಾಸ ಬರೆದ ಚೆಸ್‌ ಮಾಂತ್ರಿಕರಿಗೆ ಪ್ರಧಾನಿ ಮೋದಿಯಿಂದ ಸನ್ಮಾನ

Chess Olympiad

ಹೊಸದಿಲ್ಲಿ: ಹಂಗೇರಿಯಲ್ಲಿ ನಡೆದ ಚೆಸ್‌ ಒಲಿಂಪಿಯಾಡ್‌(Chess Olympiad)ನಲ್ಲಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಭಾರತೀಯ ಪುರುಷರ ಮತ್ತು ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಗೌರವಿಸಿದ್ದಾರೆ.

ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಸ್ವರ್ಣ ಪದಕ ಗೆದ್ದ ಭಾರತೀಯ ಪುರುಷರ ತಂಡದ ಡಿ ಗುಕೇಶ್, ಆರ್ ಪ್ರಗ್ನಾನಂದ, ಅರ್ಜುನ್ ಎರಿಗೈಸ್, ಪೆಂಟಾಲಾ ಹರಿಕೃಷ್ಣ ಮತ್ತು ಗುಜರಾತಿ ಹಾಗೂ ಮಹಿಳಾ ತಂಡದ ಡಿ ಹರಿಕಾ, ಆರ್ ವೈಶಾಲಿ, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್‌ದೇವ್ ಅವರನ್ನು ಪ್ರಧಾನಿ ಅಭಿನಂದಿಸಿದರು. ಬಳಿಕ ಕೆಲಹೊತ್ತು ಅವರ ಜತೆ ಪ್ರಧಾನಿ ಮಾತುಕತೆ ನಡೆಸಿದರು. ಅಲ್ಲದೇ ನೆಚ್ಚಿನ ಪ್ರಧಾನಿ ಎದುರು ಚೆಸ್‌ ಆಟವನ್ನೂ ಆಡಿ ಸಂಭ್ರಮಿಸಿದರು.

ಸೆಪ್ಟೆಂಬರ್ 22ರ ಭಾನುವಾರ ಹಂಗೇರಿಯಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು (India) ಪುರುಷ ಮತ್ತು ಮಹಿಳೆಯರ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ಬುಡಾಪೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಪುರುಷರ ತಂಡದ ಐತಿಹಾಸಿಕ ಗೆಲುವಿನ ನಂತರ ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್‌ಬಾಬು, ದಿವ್ಯಾ ದೇಶಮುಖ್, ವಂತಿಕಾ ಅಗರ್ವಾಲ್, ತಾನಿಯಾ ಸಚ್‌ದೇವ್ ಮತ್ತು ಅಭಿಜಿತ್ ಕುಂಟೆ ಅವರನ್ನೊಳಗೊಂಡ ಮಹಿಳಾ ತಂಡ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದೆ.

ಭಾರತವು ಚೆಸ್ ಒಲಿಂಪಿಯಾಡ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ರವಿವಾರ ಅವಳಿ ಚಿನ್ನದ ಪದಕಗಳನ್ನು ಜಯಿಸಿ ಇತಿಹಾಸ ನಿರ್ಮಿಸಿದ ನಂತರ ಡಿ.ಗುಕೇಶ್, ಅರ್ಜುನ್, ದಿವ್ಯಾ ದೇಶ್‌ಮುಖ್ ಹಾಗೂ ವಂತಿಕಾ ಅಗರ್ವಾಲ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು.

ಮತ್ತೊಂದೆಡೆ ಇಂದು, ನವದೆಹಲಿಯಲ್ಲಿ ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ಈ ಚೆಸ್ ತಂಡವನ್ನು ಅಭಿನಂದಿಸಿದೆ.

ಈ ಸುದ್ದಿಯನ್ನೂ ಓದಿ: ನಾರ್ವೆ ಚೆಸ್‌: ವಿಶ್ವನಾಥನ್‌ ಆನಂದ್‌’ಗೆ ಮೊದಲ ಸೋಲು