ಬೀಜಿಂಗ್: ಚೀನಾ (China) ತನ್ನ ಮಹತ್ವದ ಯೋಜನೆಯೊಂದನ್ನು ಘೋಷಿಸಿದ್ದು, ಟಿಬೆಟ್‌ನಲ್ಲಿ ವಿಶ್ವದ ಅತಿದೊಡ್ಡ ಅಣೆಕಟ್ಟನ್ನು (China Dam) ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸುವುದಾಗಿ ತಿಳಿಸಿದೆ. ಇದು ಥ್ರಿ ಗೋರ್ಜಸ್ ಡ್ಯಾಂಗಿಂತಲೂ ದೊಡ್ಡದು ಎಂದು ಹೇಳಲಾಗಿದೆ. ನಾಸಾ ಪ್ರಕಾರ ಅಣೆಕಟ್ಟಿನ ನಿರ್ಮಾಣದಿಂದ ಭೂಮಿಯ ತಿರುಗುವಿಕೆಯು 0.06 ಸೆಕೆಂಡುಗಳಷ್ಟು ನಿಧಾನವಾಗಲಿದೆ ಎಂದು ತಿಳಿದು ಬಂದಿದೆ.
ಅರುಣಾಚಲ ಪ್ರದೇಶಕ್ಕೆ ಬ್ರಹ್ಮಪುತ್ರ ನದಿ ಪ್ರವೇಶಿಸುವ ಮುನ್ನ ಬರುವ ಹಿಮಾಲಯದ ಕಣಿವೆಯಲ್ಲಿ ಚೀನಾ ಡ್ಯಾಂ ಅನ್ನು ನಿರ್ಮಿಸುತ್ತಿದೆ ಎಂದು ತಿಳಿದು ಬಂದಿದೆ. ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಬರೋಬ್ಬರಿ 117 ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತವನ್ನು ವಿನಿಯೋಗಿಸುತ್ತಿದೆ ಎಂದು ತಿಳಿದು ಬಂದಿದೆ.
ಚೀನಾದ ಡ್ಯಾಂನಿಂದ ಭಾರತಕ್ಕೆ ಏಕೆ ಆತಂಕ?
ಭಾರತ ನದಿಗಳ ಪೈಕಿ ಬ್ರಹ್ಮಪುತ್ರ ಪ್ರಮುಖವಾದುದು. ಇದು ಟಿಬೇಟ್‌ನಲ್ಲಿ ಉಗಮ ಹೊಂದಿ ಭಾರತದಲ್ಲಿ ಹರಿದು ಬಾಂಗ್ಲಾದೇಶದ ಮೂಲಕ ಬಂಗಾಳ ಕೊಲ್ಲಿ ಸೇರುತ್ತದೆ. ಇದೀಗ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅರುಣಾಚಲ ಪ್ರದೇಶದ ಗಡಿಯ ಸಮೀಪವೇ ಅಣೆಕಟ್ಟು ನಿರ್ಮಾಣ ಮಾಡಲು ಹೊರಟಿದೆ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಆಳವಾದ ಕಣಿವೆಯನ್ನು ಹೊಂದಿದೆ. ಇಂತಹ ಪ್ರದೇಶದಲ್ಲಿ ಭೂಮಿಯನ್ನು ಅಗೆಯುವುದು ಭೂಕಂಪಕ್ಕೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಅಣೆಕಟ್ಟನ್ನು ಚೀನಾ ಭಾರತದ ವಿರುದ್ಧ ವಾಟರ್ ಬಾಂಬ್ ಆಗಿಯೂ ಬಳಸಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅದಲ್ಲದೇ ಬ್ರಹ್ಮಪುತ್ರ ನದಿಗೆ ಅರುಣಾಚಲ ಪ್ರದೇಶದಲ್ಲಿ 12 ಜಲವಿದ್ಯುತ್ ಘಟಕಗಳನ್ನು ನಿರ್ಮಿಸಲು ಮುಂದಾಗಿದ್ದ ಭಾರತದ ಯೋಜನೆಗಳಿಗೂ ಹಿನ್ನಡೆಯಾಗಬಹುದು.
ಅಗತ್ಯ ಕ್ರಮ ಎಂದ ಭಾರತ
ಅಣೆಕಟ್ಟು ನಿರ್ಮಾಣದ ಕುರಿತು ಚೀನಾ ಘೋಷಿಸಿದ ನಂತರ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ಭಾರತದ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ (Foreign ministry) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಶುಕ್ರವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಹ್ಮಪುತ್ರದ ಕೆಳಗಿನ ರಾಜ್ಯಗಳಲ್ಲಿ ವಾಸಿಸುತ್ತಿರುವ ಜನರ ಹಿತ ರಕ್ಷಣೆ ಸಲುವಾಗಿ ಚೀನಾ ಸರ್ಕಾರದ ಬಳಿ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
Watch: MEA Spokesperson Randhir Jaiswal says, "First, regarding the dam you referred to, we have seen the information released by Xinhua on 25th December 2024 about a hydropower project on the Yarlung Tsangpo River in the Tibet Autonomous Region of China. As a lower riparian… pic.twitter.com/Iw7p8pN7HM
— IANS (@ians_india) January 3, 2025
ಈ ಸುದ್ದಿಯನ್ನೂ ಓದಿ : Covid Like Virus: ಚೀನಾದಲ್ಲಿ ಹೊಸ ವೈರಸ್ ಪತ್ತೆ; ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ