Monday, 6th January 2025

China- India : ಮತ್ತೆ ಹಳೇ ಚಾಳಿ ಮುಂದುವರಿಸಿದ ಚೀನಾ; ಭಾರತದ ಭೂಭಾಗದಲ್ಲಿ 2 ಕೌಂಟಿ ರಚನೆ

China- India

ನವದೆಹಲಿ: ಭಾರತದೊಂದಿಗೆ (India) ಸ್ನೇಹ ಹಸ್ತ ಚಾಚಿ ನಂತರ ಮತ್ತೆ ಕ್ಯಾತೆ ತೆಗೆಯುವ ಚಾಳಿಯನ್ನು ಚೀನಾ (China) ಮುಂದುವರಿಸಿದೆ. ಲಡಾಕ್‌ನಲ್ಲಿ (Ladakh) ಮತ್ತೆ ಕಿರಿಕ್‌ ಮಾಡಿದ್ದು, ಚೀನಾ ಭಾರತದ ಭೂಭಾಗದಲ್ಲಿ ಅಕ್ರಮವಾಗಿ ಎರಡು ಕೌಂಟಿಗಳನ್ನು ನಿರ್ಮಿಸಿದೆ. ಚೀನಾದ ಈ ನಡೆಯನ್ನು ಭಾರತ ಬಲವಾಗಿ ಖಂಡಿಸಿದೆ. (China- India)

ಚೀನಾದ ಈ ಪ್ರಯತ್ನಕ್ಕೆ ಭಾರತ ಸರ್ಕಾರ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.  ಭಾರತೀಯ ಭೂಪ್ರದೇಶದಲ್ಲಿ ಅಕ್ರಮ ಚೀನೀ ಆಕ್ರಮಣವನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಖಾರವಾಗಿ ಉತ್ತರಿಸಿದೆ.

ಈ ಬಗ್ಗೆ ಮಾತನಾಡಿರುವ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌ ಮಾತನಾಡಿ ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿರುವ ಚೀನಾದ ಕ್ರಮವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳೆಂದು ಕರೆಯಲ್ಪಡುವ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿವೆ (Ladakh) ಎಂದು ಹೇಳಿದ್ದಾರೆ.

ಹೊಸ ಕೌಂಟಿಗಳ ನಿರ್ಮಾಣವು ಪ್ರದೇಶದ ಮೇಲೆ ನಮ್ಮ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ನಿಲುವಿನ ಮೇಲೆ ಪರಿಣಾಮ ಬೀರುವುದಿಲ್ಲ ಅಥವಾ ಚೀನಾದ ಅಕ್ರಮ ಮತ್ತು ಬಲವಂತದ ಆಕ್ರಮಣಕ್ಕೆ ಒಪ್ಪಿಗೆ ನೀಡುವುದಿಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.

ಡಿ. 25 ರಂದು ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅತೀ ದೊಡ್ಡ ಅಣೆಕಟ್ಟು ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ಭಾರತದ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ಬ್ರಹ್ಮಪುತ್ರದ ಕೆಳಗಿನ ರಾಜ್ಯಗಳಲ್ಲಿ ವಾಸಿಸುತ್ತಿರುವ ಜನರ ಹಿತ ರಕ್ಷಣೆ ಸಲುವಾಗಿ ಚೀನಾ ಸರ್ಕಾರದ ಬಳಿ ಮಾತನಾಡುತ್ತೇವೆ ಎಂದು ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : China Dam: ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಡ್ಯಾಂ ನಿರ್ಮಿಸಲು ಮುಂದಾದ ಚೀನಾ; ಭಾರತದ ರಿಯಾಕ್ಷನ್‌ ಏನು?