ನವದೆಹಲಿ : ಚೀನಾದ ಉದ್ಯಮಿ ಝೋಂಗ್ ಶನ್ಶನ್ ಅವರು ಭಾರತದ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಪತ್ರಿಕೋದ್ಯಮ, ಅಣಬೆ ಕೃಷಿ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿಯೂ ಕೈಯ್ಯಾಡಿಸಿರುವ ಝೋಂಗ್ ಅವರ ಒಟ್ಟು ಸಂಪತ್ತಿನ ಮೌಲ್ಯ ಈ ವರ್ಷ ಅಚ್ಚರಿಯ 70.9 ಬಿಲಿಯನ್ ಡಾಲರ್ ಏರಿಕೆಯಾಗಿ 77.8 ಬಿಲಿಯನ್ ಡಾಲರ್ ತಲುಪಿದ್ದು, ಇದು ಅವರನ್ನು ಜಗತ್ತಿನ 11ನೇ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿಸಿದೆ.
66 ವರ್ಷದ ಝೋಂಗ್ ಅವರ ಯಶಸ್ಸಿಗೆ ಕಾರಣ ಅವರು ಈ ವರ್ಷ ತೆಗೆದುಕೊಂಡ ಎರಡು ನಿರ್ಧಾರಗಳು. ಎಪ್ರಿಲ್ ತಿಂಗಳಲ್ಲಿ ಅವರ ಲಸಿಕೆ ತಯಾರಿಕಾ ಸಂಸ್ಥೆ ಬೀಜಿಂಗ್ ವಂಟೈ ಬಯೊಲಾಜಿಕಲ್ ಫಾರ್ಮಸಿ ಎಂಟರಪ್ರೈಸ್ ಷೇರು ಮಾರುಕಟ್ಟೆ ಪ್ರವೇಶಿಸಿ ದ್ದರೆ ನಂತರ ಅವರ ಬಾಟಲಿ ನೀರು ತಯಾರಿಕಾ ಸಂಸ್ಥೆ ನೊಂಗ್ಫು ಕೋ ಹಾಂಕಾಂಗ್ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ತಲ್ಲಣ ಸೃಷಿಸಿತಲ್ಲದೆ ಷೇರು ಮೌಲ್ಯ ಶೇ. 155ರಷ್ಟು ಏರಿಕೆಯಾಗಿತ್ತು. ವಂಟೈ ಸಂಸ್ಥೆಯ ಷೇರು ಮೌಲ್ಯ ಶೇ 2000ದಷ್ಟು ಹೆಚ್ಚಾಗಿದೆ.
ಮುಕೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಈ ವರ್ಷ 18.3 ಬಿಲಿಯನ್ ಡಾಲರ್ ಏರಿಕೆ ಕಂಡು 76.9 ಬಿಲಿಯನ್ ಡಾಲರ್ ತಲುಪಿದೆ.