Saturday, 4th January 2025

Chinmoy Das: ಬಾಂಗ್ಲಾದೇಶದಲ್ಲಿ ಅರೆಸ್ಟ್‌ ಆಗಿರುವ ಚಿನ್ಮೋಯ್ ದಾಸ್‌ ಜಾಮೀನು ಅರ್ಜಿ ತಿರಸ್ಕಾರ

Chinmoy Krishna Das

ಢಾಕಾ: ಬಾಂಗ್ಲಾದೇಶದಲ್ಲಿಅರೆಸ್ಟ್‌ ಆಗಿರುವ ಹಿಂದೂ ಅರ್ಚಕ ಮತ್ತು ಮಾಜಿ ಇಸ್ಕಾನ್ ಸದಸ್ಯ ಚಿನ್ಮೋಯ್ ದಾಸ್(Chinmoy Das) ಅವರ ಜಾಮೀನು ಅರ್ಜಿ(Bail Plea)ಯನ್ನು ಕೋರ್ಟ್‌ ತಿರಸ್ಕರಿಸಿದೆ. ಬಿಗಿ ಭದ್ರತೆಯ ನಡುವೆ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆಗಾಗಿ ದಾಸ್ ಗುರುವಾರ ಚಿತ್ತಗಾಂಗ್ ನ್ಯಾಯಾಲಯದ ಮುಂದೆ ಹಾಜರಾದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಅವರ ಅವರ ಮನವಿಯನ್ನು ತಿರಸ್ಕರಿಸಿದೆ.

ಮೆಟ್ರೋಪಾಲಿಟನ್ ಸರ್ಕಾರಿ ಪರ ವಕೀಲ ಮೊಫಿಜುರ್ ಹಕ್ ಭುಯಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಚಟ್ಟೋಗ್ರಾಮ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ಸೈಫುಲ್ ಇಸ್ಲಾಂ ಸುಮಾರು 30 ನಿಮಿಷಗಳ ಕಾಲ ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಹೇಳಿದ್ದಾರೆ.

ಚಿನ್ಮೊಯ್‌ ದಾಸ್‌ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಕೋಲ್ಕತ್ತಾ ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯನ್ನು “ದುರಾದೃಷ್ಟಕರ” ಎಂದು ಕರೆದಿದ್ದಾರೆ. “ಅವರಿಗೆ ಇಂದು ಜಾಮೀನು ಸಿಗುತ್ತದೆ ಎಂದು ನಾವೆಲ್ಲರೂ ತುಂಬಾ ಭರವಸೆ ಹೊಂದಿದ್ದೇವೆ. ಅವರು ಸನ್ಯಾಸಿಯಾಗಿದ್ದು, ಕಳೆದ 42 ದಿನಗಳಿಂದ ಜೈಲಿನಲ್ಲಿದ್ದರು. ಅವರ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿಯನ್ನೂ ಕೇಳಿದ್ದೇವೆ. ಆದರೆ ಅವರ ಜಾಮೀನು ತಿರಸ್ಕೃತಗೊಂಡಿದೆ. ಇದು ಅತ್ಯಂತ ದುರದೃಷ್ಟಕರ. ನ್ಯಾಯಾಧೀಶರು ಏಕೆ ಜಾಮೀನು ನಿರಾಕರಿಸಿದರು ಎಂಬುದೇ ಅರ್ಥವಾಗ್ತಿಲ್ಲ ಎಂದಿದ್ದಾರೆ.

ನವೆಂಬರ್ 25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಯಿತು. ಅಂದಿನಿಂದ ಹಿಂಸಾಚಾರ ಮತ್ತು ಅಶಾಂತಿ ಪ್ರಾರಂಭವಾಗಿದೆ. ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದ್ದು, ಜಾಮೀನನ್ನು ನಿರಾಕರಿಸಲಾಗಿದೆ. ಅವರ ಬಂಧನದ ನಂತರ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು. ಅವರ ಬಿಡುಗಡೆಗೆ ಹಿಂದೂ ಸಮುದಾಯವು ಒತ್ತಾಯಿಸಿದೆ.

ಈ ಸುದ್ದಿಯನ್ನೂ ಓದಿ: AMU Row: ಬಾಂಗ್ಲಾದೇಶ ವಿದ್ಯಾರ್ಥಿಗಳಿಂದ ಹಿಂದೂ ವಿರೋಧಿ ಪೋಸ್ಟ್- AMUನಲ್ಲಿ ಭುಗಿಲೆದ್ದ ಆಕ್ರೋಶ