ಕೋಲ್ಕತಾ: ಢಾಕಾದಲ್ಲಿ ಭಾಂಗ್ಲಾದೇಶ ಪೊಲೀಸರು ಸೋಮವಾರ (ನ. 25) ಬಂಧಿಸಿರುವ ಹಿಂದೂ ಧಾರ್ಮಿಕ (Bangladeshi Hindu Monk) ಮುಖಂಡ, ಇಸ್ಕಾನ್ ದೇಗುಲಗಳ ಆಡಳಿತ ಮಂಡಳಿ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್ (Chinmoy Krishna Das) ಅವರ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ (BJP) ಪಶ್ಚಿಮ ಬಂಗಾಳ ಮತ್ತು ರಾಜ್ಯದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸರಣಿ ಪ್ರತಿಭಟನೆ ಘೋಷಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸಿ, ಬೃಹತ್ ಪ್ರತಿಭಟನೆ ನಡೆಸುವ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ಬಂಧಿಸಿರುವ ಪೊಲೀಸರು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿನ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಕಳೆದ ಆಗಸ್ಟ್ನಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ ಬಳಿಕ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆನ ದೌರ್ಜನ್ಯ ಮಿತಿ ಮೀರಿದೆ. ಈ ಹಿಂಸಾಚಾರವನ್ನು ಖಂಡಿಸಿ ಚಿನ್ಮೋಯ್ ಕೃಷ್ಣ ದಾಸ್ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
#WATCH | On the detention of ISKCON Bangladesh priest Chinmoy Krishna Das by Dhaka police, Sri Sri Ravishankar says, "It is unbecoming of a Prime Minister of a neighbouring country to arrest a spiritual leader. He is not taking weapons, he is not taking guns, he is caring for his… pic.twitter.com/vXvjydC7B4
— ANI (@ANI) November 26, 2024
ಬಿಜೆಪಿ ಹೇಳಿದ್ದೇನು?
ಮಂಗಳವಾರ ಬಾಂಗ್ಲಾದ ಚಿತ್ತಗಾಂಗ್ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೃಷ್ಣ ದಾಸ್ ಅವರಿಗೆ ಜಾಮೀನು ನಿರಾಕರಿಸಿದ ಬಳಿಕ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ (Suvendu Adhikari) ಅವರು ತಮ್ಮ ಪಕ್ಷದ ಶಾಸಕರೊಂದಿಗೆ ವಿಧಾನಸಭೆಯ ಪರಿಸರದಲ್ಲಿ ಪ್ರತಿಭಟನೆ ನಡೆಸಿದರು.
ʼʼಬಿಜೆಪಿ ಶಾಸಕರು ಬುಧವಾರ (ನ. 27) ಕೋಲ್ಕತಾದಲ್ಲಿರುವ ಬಾಂಗ್ಲಾದೇಶದ ಉಪ ಹೈಕಮಿಷನ್ಗೆ ಘೇರಾವ್ ಹಾಕಲಿದ್ದಾರೆ. ಹಿಂದೂ ಜಾಗರಣ ಮಂಚ್ ಗುರುವಾರ ಸೀಲ್ಡಾ ನಿಲ್ದಾಣದಿಂದ ಉಪ ಹೈಕಮಿಷನರ್ ಕಚೇರಿವರೆಗೆ ಮೆರವಣಿಗೆ ನಡೆಸಲಿದೆ ಮತ್ತು ಬಿಜೆಪಿ ಶಾಸಕರು ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಬಾಂಗ್ಲಾದೇಶ ಗಡಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ” ಎಂದು ಸುವೇಂದು ಅಧಿಕಾರಿ ತಿಳಿಸಿದರು.
ಕೃಷ್ಣ ದಾಸ್ ಅವರ ಬಂಧನದ ವಿರುದ್ದ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತ ಹಿಂದೂಗಳು ಮತ್ತು ಅವರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ದುಷ್ಕರ್ಮಿಗಳನ್ನು ಬಂಧಿಸದೆ ತಮ್ಮ ಹಕ್ಕುಗಳಿಗೆ ಬೇಡಿಕೆ ಮಂಡಿಸಿದ ಧಾರ್ಮಿಕ ಮುಖಂಡರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಖಂಡಿಸಿದೆ.
“ಬಾಂಗ್ಲಾದೇಶ ಸಮ್ಮಿಲಿತ್ ಸನಾತನ ಜಾಗರಣ ಜೋಟೆಯ ವಕ್ತಾರರೂ ಆಗಿರುವ ಕೃಷ್ಣ ದಾಸ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಕಳವಳಕಾರಿ. ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಲಾಗುತ್ತಿದೆ. ಅಲ್ಲದೆ ಹಿಂದೂ ದೇವಾಲಯಗಳ ಮೇಲೂ ಆಕ್ರಮಣ ನಡೆದಿದೆ. ಇದರ ವಿರುದ್ದ ಕ್ರಮ ಕೈಗೊಳ್ಳದೆ ಕೃಷ್ಣ ದಾಸ್ ಅವರನ್ನು ಬಂಧಿಸಿರುವುದು ಖಂಡನೀಯʼʼ ಎಂದು ತಿಳಿಸಿದೆ.
ಬಾಂಗ್ಲಾದಲ್ಲಿ ಪ್ರತಿಭಟನೆ
ಕೃಷ್ಣ ದಾಸ್ ಅವರಿಗೆ ಜಾಮೀನು ನಿರಾಕರಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆ ಅವರ ಅನುಯಾಯಿಗಳು ಪ್ರತಿಭಟನೆ ನಡೆಸಿದರು. ಅವರನ್ನು ಬಿಡುಗಡೆಗೊಳಿಸುವಂತೆ ಘೋಷಣೆ ಕೂಗಿದರು. ಕೃಷ್ಣ ದಾಸ್ ಅವರನ್ನು ಕರೆದುಕೊಂಡು ಹೋಗುವ ವಾಹನವನ್ನು ತಡೆದಿದ್ದಾರೆ. ಕೊನೆಗೆ ಪೊಲೀಸರು ಬಲವಂತದಿಂದ ಅವರನ್ನು ಚದುರಿಸಬೇಕಾಯಿತು ಎಂದು ವರದಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Chinmoy Krishna Das: ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಪ್ರಭುಗೆ ಜಾಮೀನು ನಿರಾಕರಣೆ… ದೇಶದ್ರೋಹ ಕೇಸ್ ದಾಖಲು