ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂದೂ ನಾಯಕ, ಇಸ್ಕಾನ್ ಮುಖಂಡ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಬಂಧಿಸಲಾಗಿದ್ದು, ವಿವಿಧ ಕಡೆಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಭಾರತ ಸರ್ಕಾರ ಕೂಡ ತನ್ನ ವಿರೋಧ ಸೂಚಿಸಿದೆ. ಈ ಮಧ್ಯೆ ಪಶ್ವಿಮ ಬಂಗಾಳದ ಕೋಲ್ತತಾದಲ್ಲಿ ಬಿಜೆಪಿ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಇಸ್ಕಾನ್ ಕೂಡ ಕೈಜೋಡಿಸಿದೆ. ಇಸ್ಕಾನ್ ದೇಗುಲದ ಮುಂಭಾಗ ಬೆಂಬಲಿಗರು ಗುಂಪಗೂಡಿ ʼನಾವು ಭಯೋತ್ಪಾದಕರಲ್ಲʼ ಎನ್ನುವ ಬ್ಯಾನರ್ ಪ್ರದರ್ಶಿಸಿದರು.
ಬಿಜೆಪಿ 2 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಗುರುವಾರ (ನ. 28) ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗ, ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್ ಮತ್ತು ಬಂಗಿಯಾ ಹಿಂದೂ ಜಾಗರಣ ಮಂಚ್ ಕೂಡ ಚಿನ್ಮಯ್ ಕೃಷ್ಣ ದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಾಂಗ್ಲಾದೇಶದ ಉಪ ಹೈಕಮಿಷನ್ ಕಡೆಗೆ ಪ್ರತ್ಯೇಕ ಮೆರವಣಿಗೆ ನಡೆಸಿದವು.
#WATCH | Kolkata, West Bengal | A police personnel got injured while a scuffle broke out between the police and members of Hindu Mahasabha.
— ANI (@ANI) November 28, 2024
Members of Hindu Mahasabha are marching towards Bangladesh's deputy high commission protesting against the ongoing atrocities against… pic.twitter.com/K9V8i4eNCh
ಕೋಲ್ಕತಾ ಇಸ್ಕಾನ್ನ ಉಪಾಧ್ಯಕ್ಷ ರಾಧಾರಮಣ್ ದಾಸ್ ಅವರ ನೇತೃತ್ವದದಲ್ಲಿ ಶಾಂತಿಯುತ ಮೆರವಣಿಗೆ ನಡೆಸಲಾಯಿತು. ಕೀರ್ತನೆಗಳನ್ನು ಹಾಡುತ್ತ ಪ್ರತಿಭಟನೆ ನಡೆಸಿದರು. ಇಸ್ಕಾನ್ ಸನ್ಯಾಸಿಗಳು ಮತ್ತು ಸದಸ್ಯರ ಜತೆಗೆ ಮಹಿಳೆಯರು ಮತ್ತು ಮಕ್ಕಳೂ ಭಾಗವಹಿಸಿದ್ದರು. ದೇಶದಲ್ಲಿ ಇಸ್ಕಾನ್ ಅನ್ನು ನಿಷೇಧಿಸದಂತೆ ಪ್ರತಿಭಟನಾಕಾರರು ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಿದರು.
ಕಾಂಗ್ರೆಸ್ನ ಅಲ್ಪಸಂಖ್ಯಾತ ಮತ್ತು ಯುವ ವಿಭಾಗ ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಗುಲಾಬಿ ಮತ್ತು ಬ್ಯಾನರ್ ಹಿಡಿದು ಮೆರವಣಿಗೆ ನಡೆಸಿದರು. ಇನ್ನು ಬಂಗಿಯಾ ಹಿಂದೂ ಜಾಗರಣ ಮಂಚ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಂಘರ್ಷ ಭುಗಿಲೆದ್ದಿತು. ಪ್ರತಿಭಟನಾಕಾರರು ಬಲವಂತವಾಗಿ ಬ್ಯಾರಿಕೇಡ್ಗಳನ್ನು ಕಿತ್ತು ಹಾಕಿದರು. ಇದರಿಂದ ಪೊಲೀಸರೊಂದಿಗೆ ಘರ್ಷಣೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಉಪ ಹೈಕಮಿಷನ್ ಕಚೇರಿ ಬಳಿ ತಲುಪಿದ ಪ್ರತಿಭಟನಾಕಾರರಿಗೆ ಪೊಲೀಸರು, ಬಾಂಗ್ಲಾದೇಶದ ರಾಜತಾಂತ್ರಿಕರನ್ನು ಭೇಟಿ ಮಾಡಲು 5 ಸದಸ್ಯರ ನಿಯೋಗಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಭಟನಾಕಾರರು ಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ ಶಾಂತಿಯುತವಾಗಿ ಮಾತುಕತೆ ನಡೆಯಿತು.
#WATCH | Kolkata, West Bengal | A scuffle broke out between police and members of Hindu Mahasabha while they were marching towards Bangladesh's deputy high commission protesting against the ongoing atrocities against Hindus and other minorities in Bangladesh. pic.twitter.com/d5QYUowFsS
— ANI (@ANI) November 28, 2024
ಮಮತಾ ಬ್ಯಾನರ್ಜಿ ಖಂಡನೆ
ಚಿನ್ಮಯಿ ಕೃಷ್ಣ ದಾಸ್ ಅವರ ಬಂಧನವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಖಂಡಿಸಿದ್ದಾರೆ. ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಾಂಗ್ಲಾದೇಶದಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ಘಟನೆ ಹಿನ್ನೆಲೆಯಲ್ಲಿ ಇಸ್ಕಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಪರಿಸ್ಥಿತಿಯನ್ನು ದುರದೃಷ್ಟಕರ ಎಂದು ಬಣ್ಣಿಸಿದ ಅವರು, ಈ ವಿವಾದವನ್ನು ಪರಿಹರಿಸಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
“ಬಾಂಗ್ಲಾದೇಶದಲ್ಲಿ ನಡೆದ ಘಟನೆ ನನ್ನನ್ನು ನೋಯಿಸಿವೆ. ಭಾರತ ಸರ್ಕಾರವು ಈ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ನಾವು ಕೇಂದ್ರದ ನಿಲುವನ್ನು ಅನುಸರಿಸುತ್ತೇವೆ. ಭಾರತ ಸರ್ಕಾರವು ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನಾವು ಬಾಂಗ್ಲಾದೇಶವನ್ನು ಪ್ರೀತಿಸುತ್ತೇವೆ. ಬಾಂಗ್ಲಾದೇಶ ಕೂಡ ನಮ್ಮನ್ನು ಪ್ರೀತಿಸುತ್ತದೆ ಎಂದು ನನಗೆ ಖಾತ್ರಿಯಿದೆ. ನಾವು ಒಂದೇ ಭಾಷೆಯನ್ನು ಮಾತನಾಡುತ್ತೇವೆ, ಒಂದೇ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತೇವೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು ಅಥವಾ ಕ್ರಿಶ್ಚಿಯನ್ನರು ಯಾವುದೇ ಧರ್ಮದ ಜನರ ಮೇಲಿನ ದಾಳಿಯನ್ನು ನಾವು ಬೆಂಬಲಿಸುವುದಿಲ್ಲ. ಆದಾಗ್ಯೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ನಿರ್ದಿಷ್ಟ ಧರ್ಮದ ವಿರುದ್ಧವಾಗಿದೆ” ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೆನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಜಾರ್ಖಂಡ್ಗೆ ತೆರಳುವ ಮೊದಲು ಅವರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ. ಸಿಪಿಐ (ಎಂ) ಮತ್ತು ಸಿಪಿಐ ಕೂಡ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿದೆ.
ಈ ಸುದ್ದಿಯನ್ನೂ ಓದಿ: ISKCON: ಬಾಂಗ್ಲಾದಲ್ಲಿ ಇಸ್ಕಾನ್ ನಿಷೇಧಕ್ಕೆ ಮುಸ್ಲಿಂ ಮೂಲಭೂತವಾದಿ ಶಕ್ತಿಗಳ ಸಂಚು! ಇಸ್ಕಾನ್ ಟಾರ್ಗೆಟ್ ಯಾಕೆ?