ನವದೆಹಲಿ : ತಿಹಾರ್ ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್ನನ್ನು (Chota Rajan) ಅನಾರೋಗ್ಯದ ಕಾರಣದಿಂದಾಗಿ ಶುಕ್ರವಾರ ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ರಾಜನ್ಗೆ ಸೈನಸ್ ಸಮಸ್ಯೆ ಇದ್ದು, ಶಸ್ತ್ರಚಿಕಿತ್ಸೆಗೆ ಒಳಪಡಿಸಬಹುದು ಎಂದು ತಿಳಿದು ಬಂದಿದೆ.
ದಾವೂದ್ ಇಬ್ರಾಹಿಂನ ಆಪ್ತ ಸಹಾಯಕನಾಗಿದ್ದ ರಾಜನ್, 2001ರಲ್ಲಿ ಹೊಟೇಲ್ ಉದ್ಯಮಿ ಜಯ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ 2024 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. 2024ರ ಅಕ್ಟೋಬರ್ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕಿದ್ದರು ಇತರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಸಿಕ್ಕಿರಲಿಲ್ಲ.
ಮುಂಬೈನ ಗಾಮ್ದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕರಾಗಿದ್ದ ಜಯ ಶೆಟ್ಟಿ ಅವರ ಹತ್ಯೆಗೆ ರಾಜನ್ ಮುಖ್ಯ ರೂವಾರಿಯಾಗಿದ್ದ. ಮೇ 4, 2001 ರ ರಾತ್ರಿ, ರಾಜನ್ ಅವರ ಇಬ್ಬರು ಶೂಟರ್ಗಳು ಹೋಟೆಲ್ ಆವರಣಕ್ಕೆ ನುಗ್ಗಿ ಜಯ ಶೆಟ್ಟಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
2011ರಲ್ಲಿ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ವಿಶೇಷ ನ್ಯಾಯಾಲಯ ರಾಜನ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಛೋಟಾ ರಾಜನ್ನ ಮೂಲ ಹೆಸರು, ರಾಜೇಂದ್ರ ಸದಾಶಿವ ನಿಕಾಲ್ಜಿ. ಅಕ್ಟೋಬರ್ 2015 ರಲ್ಲಿ ಈತನನ್ನು ಇಂಡೋನೇಷಿಯಾ ಪೊಲೀಸರು ಬಂಧಿಸಿ ಭಾರತಕ್ಕೆ ಒಪ್ಪಿಸಿದ್ದರು. ಸುಮಾರು ಮೂರು ದಶಕಗಳ ಕಾಲ ಈತ ಮುಂಬೈ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಾ ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ.
1979ರಲ್ಲಿ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ರಾಜನ್ನನ್ನು ಮೊದಲು ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ, ದರೋಡೆಕೋರ ಬಡಾ ರಾಜನ್ ಗ್ಯಾಂಗ್ಗೆ ಸೇರಿಕೊಂಡನು ಮತ್ತು ನಂತರ ದಾವೂದ್ ಇಬ್ರಾಹಿಂ ಅಡಿಯಲ್ಲಿ ಆಶ್ರಯ ಪಡೆದನು. 1989 ರಲ್ಲಿ, ರಾಜನ್ ದುಬೈ ಮತ್ತು ಇಂಡೋನೇಷ್ಯಾಕ್ಕೆ ಓಡಿಹೋಗಿದ್ದ.
ಮತ್ತೊಂದೆಡೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ (Dawood Ibrahim) ಸಹೋದರ ಇಕ್ಬಾಲ್ ಕಸ್ಕರ್ಗೆ ಸೇರಿದ ಫ್ಲಾಟನ್ನು ವಶಪಡಿಸಿಕೊಳ್ಳಲಾಗಿದೆ. (Iqbal Kaskar) ಆತ ಮತ್ತು ಆತನ ಸಹಚರರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಮಹಾರಾಷ್ಟ್ರದ ಥಾಣೆಯಲ್ಲಿರುವ ಆತನ ಫ್ಲಾಟ್ ಅನ್ನು ಸ್ವಾಧೀನಪಡಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ : ಛೋಟಾ ರಾಜನ್ ಸೇರಿ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ